
ಬೆಂಗಳೂರು, 16 ನವೆಂಬರ್ (ಹಿ.ಸ.):
ಮದ್ಯಪಾನದ ಬಳಿಕ ಸ್ನೇಹಿತರ ನಡುವೆ ಉಂಟಾದ ವೈಯಕ್ತಿಕ ವಿಚಾರದ ಜಗಳ ವಿಕೋಪಕ್ಕೆ ತಿರುಗಿ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ನಗರದ ಜೆ.ಸಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯ್ (22) ಕೊಲೆಯಾದ ಯುವಕ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿನೋದ್ ಕುಮಾರ್ ಮತ್ತು ಉದಯ್ ಕಿರಣ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಏಪ್ರಿಲ್ 3ರಂದು ರಾತ್ರಿ ಮದ್ಯದ ಅಮಲಿನಲ್ಲಿದ್ದ ವಿಜಯ್ ವೈಯಕ್ತಿಕ ವಿಚಾರವಾಗಿ ಸ್ನೇಹಿತ ವಿನೋದ್ ಕುಮಾರ್ ಜತೆ ವಾಗ್ವಾದ ನಡೆಸಿದ್ದ. ಈ ವೇಳೆ ವಿನೋದ್‌ನ ದ್ವಿಚಕ್ರ ವಾಹನದ ಮೇಲೆ ಕಲ್ಲು ತೂರಿದ್ದ ಎನ್ನಲಾಗಿದೆ.
ಬಳಿಕ ವಿನೋದ್ ಕುಮಾರ್ ತನ್ನ ಸಹಚರ ಉದಯ್ ಕಿರಣ್ ಜತೆ ವಿಜಯ್ ಮನೆಗೆ ತೆರಳಿ ಈ ಕುರಿತು ಪ್ರಶ್ನಿಸಿದ್ದಾನೆ. ಆಗ ಇಬ್ಬರ ನಡುವೆ ಮತ್ತೆ ಗಲಾಟೆ ನಡೆದಿದ್ದು, ಕಲ್ಲು ತೂರಾಟ ಹಾಗೂ ಬೆದರಿಕೆಗಳು ನಡೆದಿದ್ದವು ಎಂದು ತಿಳಿದುಬಂದಿದೆ.
ಇಷ್ಟಕ್ಕೆ ನಿಲ್ಲದ ಜಗಳ ಮರುದಿನವೂ ಮುಂದುವರಿದಿತ್ತು. ಉದಯ್ ಕಿರಣ್ ಪರಿಚಯದ ಯುವತಿಯೊಬ್ಬರ ಮನೆಗೆ ತೆರಳಿದ್ದ ವಿಜಯ್, ಆಕೆಯೊಂದಿಗೆ ಅವಾಚ್ಯವಾಗಿ ಮಾತನಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಆಕ್ರೋಶಗೊಂಡಿದ್ದ ಆರೋಪಿಗಳು ವಿಜಯ್‌ಗಾಗಿ ಹುಡುಕಾಟ ನಡೆಸಿದ್ದರು.
ಬಳಿಕ ಜೆ.ಸಿ. ನಗರ ಮುಖ್ಯರಸ್ತೆ ಸಮೀಪದ ರಸ್ತೆಯೊಂದರಲ್ಲಿ ಸಂಚರಿಸುತ್ತಿದ್ದ ವಿಜಯ್‌ನನ್ನು ವಿನೋದ್ ಕುಮಾರ್ ಮತ್ತು ಉದಯ್ ಕಿರಣ್ ಅಡ್ಡಗಟ್ಟಿದ್ದಾರೆ. ಈ ವೇಳೆ ಇಬ್ಬರೂ ಸೇರಿ ಆತನಿಗೆ ಹಲವು ಬಾರಿ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ವಿಜಯ್‌ನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ವಿಜಯ್‌ನ ಹೊಟ್ಟೆ ಮತ್ತು ಕತ್ತಿನ ಬಲಭಾಗದಲ್ಲಿ ತೀವ್ರ ಗಾಯಗಳಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಹೇಳಿಕೆ:
ವಿಜಯ್ ಹಾಗೂ ಆರೋಪಿಗಳಾದ ವಿನೋದ್ ಕುಮಾರ್ ಮತ್ತು ಉದಯ್ ಕಿರಣ್ ಸ್ನೇಹಿತರಾಗಿದ್ದು, ಆಗಾಗ್ಗೆ ಒಟ್ಟಿಗೆ ಸೇರುತ್ತಿದ್ದರು. ಮದ್ಯದ ಅಮಲಿನಲ್ಲಿ ವಿಜಯ್, ಉದಯ್ ಕಿರಣ್ ಪ್ರೀತಿಸುತ್ತಿದ್ದ ಯುವತಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದೇ ದಾಳಿಗೆ ಪ್ರಮುಖ ಕಾರಣ ಎನ್ನಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೃತನ ಅತ್ತಿಗೆ ನೀಡಿದ ದೂರಿನ ಮೇರೆಗೆ ಜೆ.ಸಿ. ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) (ಕೊಲೆ) ಮತ್ತು 61(1) (ಅಪರಾಧ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R