
ವಿಜಯಪುರ, 13 ನವೆಂಬರ್ (ಹಿ.ಸ.):
ಜಮೀನು ಲೀಸ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ, ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ನಡೆದಿದೆ.
ತಡಲಗಿ ಗ್ರಾಮದ ಹನುಮವ್ವ ಮೇಟಿ ಅವರಿಗೆ ಸೇರಿದ ಸುಮಾರು 10 ಎಕರೆ ಜಮೀನನ್ನು ಅದೇ ಗ್ರಾಮದ ಸಾಲೋಟಗಿ ಕುಟುಂಬದವರು ಲೀಸ್ಗೆ ಪಡೆದು ಕಬ್ಬು ಬೆಳೆದಿದ್ದರು.
ಈ ಜಮೀನಿನಲ್ಲಿ ನಮಗೂ ಪಾಲಿದೆ ಎಂದು ಹನುಮವ್ವ ಅವರ ಸಂಬಂಧಿಕರು ತಗಾದೆ ತೆಗೆದಿದ್ದರು ಎನ್ನಲಾಗಿದೆ. ಅಲ್ಲದೆ, ಬೆಳೆದಿರುವ ಕಬ್ಬನ್ನು ಕಟಾವು ಮಾಡದಂತೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಬಾರಿ ಕಬ್ಬು ಬೆಳೆದಿದ್ದು, ಕಟಾವು ಮಾಡಿಕೊಂಡು ಹೋಗುತ್ತೇವೆ. ಮುಂದಿನ ವರ್ಷದಿಂದ ಜಮೀನನ್ನು ಲೀಸ್ಗೆ ಪಡೆಯುವುದಿಲ್ಲ ಎಂದು ಸಾಲೋಟಗಿ ಕುಟುಂಬದವರು ತಿಳಿಸಿದ್ದರು.
ಆದರೆ, ಇದಕ್ಕೆ ಹನುಮವ್ವ ಅವರ ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಇಂದು ಸಾಲೋಟಗಿ ಕುಟುಂಬದವರು ಕಬ್ಬು ಕಟಾವು ಮಾಡಲು ಜಮೀನಿಗೆ ತೆರಳಿದ ಸಂದರ್ಭದಲ್ಲಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ವೇಳೆ ಕಲ್ಲು, ಕಟ್ಟಿಗೆ ಹಾಗೂ ಬಡಿಗೆಗಳಿಂದ ಪರಸ್ಪರ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಹನುಮವ್ವ ಅವರ ಸಂಬಂಧಿಕರು ಜಮೀನು ಲೀಸ್ ಪಡೆದಿದ್ದ ಸಾಲೋಟಗಿ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಸಾಲೋಟಗಿ ಕುಟುಂಬದ ಹನುಮಂತ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೊಲ್ಹಾರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಜಮೀನು ವಿವಾದವೇ ಘರ್ಷಣೆಗೆ ಪ್ರಮುಖ ಕಾರಣ ಎನ್ನಲಾಗಿದ್ದು, ಘಟನೆಯ ಸಂಪೂರ್ಣ ವಿವರ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R