ಸಹಕಾರಿ ಬ್ಯಾಂಕುಗಳಿಂದ ರೈತರು, ಮಹಿಳೆಯರ ಆರ್ಥಿಕ ಪ್ರಗತಿ ಸಾಧ್ಯ: ವಿ. ರಘುಪತಿರೆಡ್ಡಿ
ಕೋಲಾರ, 16 ನವೆಂಬರ್ (ಹಿ.ಸ.) ಸಹಕಾರಿ ಬ್ಯಾಂಕುಗಳಿಂದ ಮಾತ್ರ ರೈತರು ಮತ್ತು ಮಹಿಳೆಯರ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಲಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಸಹಕಾರ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ಕಾರ್ಯವಾಗಬೇಕು ಎಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಹಾಗೂ ಸಹ
ಮುಳಬಾಗಿಲು ತಾಲ್ಲೂಕು ಊರುಕುಂಟೆ ಮಿಟ್ಟೂರು ನಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮಕ್ಕೆ ಡಿಸಿಸಿ ಬ್ಯಾಂಕ್ ನಿರ್ದೇಶಕ ವಿ.ರಘುಪತಿರೆಡ್ಡಿ ಚಾಲನೆ ನೀಡಿದರು.


ಕೋಲಾರ, 16 ನವೆಂಬರ್ (ಹಿ.ಸ.)

ಸಹಕಾರಿ ಬ್ಯಾಂಕುಗಳಿಂದ ಮಾತ್ರ ರೈತರು ಮತ್ತು ಮಹಿಳೆಯರ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಲಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಸಹಕಾರ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ಕಾರ್ಯವಾಗಬೇಕು ಎಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಹಾಗೂ ಸಹಕಾರಿ ಯೂನಿಯನ್ ನಿರ್ದೇಶಕ ವಿ. ರಘುಪತಿರೆಡ್ಡಿ ತಿಳಿಸಿದರು.

ಮುಳಬಾಗಿಲು ತಾಲ್ಲೂಕಿನ ಊರುಕುಂಟೆ ಮಿಟ್ಟೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹ-2026ರ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ, ತಂತ್ರಜ್ಞಾನ, ಕೌಶಲ್ಯಾಧಾರಿತ ಮತ್ತು ವೃತ್ತಿಪರ ಸೇವೆ’ ಎಂಬ ಧ್ಯೇಯವಾಕ್ಯದಡಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಹಕಾರ ಶಿಕ್ಷಣ, ತರಬೇತಿ ಮತ್ತು ಪ್ರಚಾರದ ಮೂಲಕ ಸಹಕಾರ ಸಂಸ್ಥೆಗಳಲ್ಲಿ ಪರಿಣಾಮಕಾರಿ ಬೆಳವಣಿಗೆ ಸಾಧಿಸುವುದು ಇಂದಿನ ಪ್ರಮುಖ ಉದ್ದೇಶವಾಗಿದೆ. ಸಹಕಾರಿ ಯೂನಿಯನ್ ಸಹಕಾರ ಸಂಸ್ಥೆಗಳ ನೌಕರರು ಹಾಗೂ ನಿರ್ದೇಶಕರಿಗೆ ಸೂಕ್ತ ತರಬೇತಿ ನೀಡಲು ಸಿದ್ಧವಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಸಹಕಾರಿ ಬ್ಯಾಂಕುಗಳಲ್ಲಿ ರೈತರು ಮತ್ತು ಮಹಿಳೆಯರು ಧೈರ್ಯದಿಂದ ಹಾಗೂ ಸ್ವಾಭಿಮಾನದಿಂದ ಸಾಲ ಕೇಳಬಹುದು. ಸಹಕಾರಿ ಬ್ಯಾಂಕುಗಳು ತಮ್ಮದೇ ಸಂಸ್ಥೆಗಳಾಗಿದ್ದು, ಇಲ್ಲಿ ಆತ್ಮೀಯತೆಯಿಂದ ವ್ಯವಹರಿಸಲು ಅವಕಾಶವಿದೆ. ಆದರೆ ಖಾಸಗಿ ಬ್ಯಾಂಕುಗಳಲ್ಲಿ ಗ್ರಾಹಕರನ್ನು ಕೂರಿಸಿ ಮಾತನಾಡಿಸುವ ಸೌಜನ್ಯದ ಸಂಸ್ಕೃತಿ ಇರುವುದಿಲ್ಲ ಎಂದು ಹೇಳಿದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಕ್ಷಾಂತರ ರೈತರು ಮತ್ತು ಮಹಿಳೆಯರ ಬದುಕಿಗೆ ಆಧಾರವಾಗಿದೆ. ಇಂತಹ ಸಂಸ್ಥೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಆದರೆ ಸಹಕಾರ ವ್ಯವಸ್ಥೆಯಲ್ಲಿ ರಾಜಕೀಯ ಬೆರೆತುಹೋಗಿದ್ದು, ಸಣ್ಣಪುಟ್ಟ ಸಹಕಾರ ಸಂಘಗಳಲ್ಲೂ ರಾಜಕೀಯ ಹಸ್ತಕ್ಷೇಪ ಹೆಚ್ಚುತ್ತಿರುವುದರಿಂದ ಇಡೀ ವ್ಯವಸ್ಥೆಯ ಬೆಳವಣಿಗೆಗೆ ಹಿನ್ನಡೆಯಾಗುತ್ತಿದೆ ಎಂದು ವಿಷಾದಿಸಿದರು.

ಸಹಕಾರ ಸಂಘಗಳ ಮೂಲಕ ಅನೇಕರು ರಾಜಕೀಯ ಪ್ರವೇಶಿಸುತ್ತಾರೆ ಎಂಬುದು ಸತ್ಯ. ಆದರೆ ರಾಜಕೀಯ ಹಸ್ತಕ್ಷೇಪದಿಂದ ಸಂಘಗಳ ಬೆಳವಣಿಗೆಗೆ ಧಕ್ಕೆಯಾಗದಂತೆ ಸಹಕಾರ ಕ್ಷೇತ್ರದಲ್ಲಿ ಮುಕ್ತ ಚರ್ಚೆ ನಡೆಯಬೇಕು. ಪ್ರತಿವರ್ಷ ನವೆಂಬರ್ 14ರಿಂದ 20ರವರೆಗೆ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ದೇಶಾದ್ಯಂತ ಸಹಕಾರ ಸಪ್ತಾಹ ಆಚರಿಸಲಾಗುತ್ತದೆ. ರೈತರು, ಮಹಿಳೆಯರು, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ನೆಹರು ಅವರು ಸಹಕಾರ ವ್ಯವಸ್ಥೆಯ ಮೂಲಕ ರೂಪಿಸಿದ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುತ್ತದೆ ಎಂದರು.

ಸಹಕಾರ ಸಂಘಗಳಲ್ಲಿ ಎಲ್ಲ ಜಾತಿ ಮತ್ತು ವರ್ಗದ ಜನರಿಗೆ ಸದಸ್ಯತ್ವ ನೀಡಿದರೆ ಸಂಸ್ಥೆಗಳು ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ. ಆದರೆ ಕೆಲವು ಸಂಘಗಳು ಕೆಲವೇ ಮಂದಿಗೆ ಸೀಮಿತವಾಗಿರುವುದು ಸರಿಯಲ್ಲ. ಸಹಕಾರ ವ್ಯವಸ್ಥೆಯ ಸದಸ್ಯತ್ವ ಸಮಾಜದ ಕಟ್ಟಕಡೆಯ ಕುಟುಂಬಕ್ಕೂ ತಲುಪಬೇಕು. ಸದಸ್ಯತ್ವ ಹೆಚ್ಚಳದ ಜತೆಗೆ ಪ್ರತಿಯೊಬ್ಬರ ಭಾಗವಹಿಸುವಿಕೆಯಿಂದ ಸಹಕಾರ ಕ್ಷೇತ್ರವನ್ನು ಬಲಪಡಿಸಬೇಕು. ಸಹಕಾರ ತತ್ವಗಳ ಆಧಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಲಕ್ಷ್ಮೀನಾರಾಯಣ, ಊರುಕುಂಟೆ ಮಿಟ್ಟೂರು ವ್ಯವಸಾಯ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಹಿರಿಯಪ್ಪ, ನಾರಾಯಣಸ್ವಾಮಿ, ನಾಗರಾಜು, ಗುಂಡಮ್ಮ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮುಳಬಾಗಿಲು ಶಾಖೆಯ ವ್ಯವಸ್ಥಾಪಕ ಅಮ್ಜದ್ ಖಾನ್, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಕೆ.ಎಂ., ಊರುಕುಂಟೆ ಮಿಟ್ಟೂರು ವ್ಯವಸಾಯ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನಂಜಯ್, ಸಹಕಾರಿ ಯೂನಿಯನ್‌ನ ರವಿ ಮತ್ತಿತರರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande