
ಬೆಂಗಳೂರು, 08 ಅಕ್ಟೋಬರ್ (ಹಿ.ಸ.):
ಮದ್ಯದ ಅಮಲಿನಲ್ಲಿ ಅತಿವೇಗವಾಗಿ ಚಲಾಯಿಸುತ್ತಿದ್ದ ಜಾಗ್ವಾರ್ ಕಾರೊಂದು ನಿಯಂತ್ರಣ ತಪ್ಪಿ ಪೆಟ್ರೋಲ್ ಬಂಕ್ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಹಾಗೂ ಪೆಟ್ರೋಲ್ ಪಂಪ್ಗೆ ಬೆಂಕಿ ಹೊತ್ತಿಕೊಂಡ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಭಾಗದಲ್ಲಿ ನಡೆದಿದೆ.
ಅತ್ತಿಬೆಲೆಯ ಹೆಚ್ಪಿ ಪೆಟ್ರೋಲ್ ಬಂಕ್ನಲ್ಲಿ ಘಟನೆ ಸಂಭವಿಸಿದ್ದು, ಸಂಜಯ್ ಎಂಬಾತ ಯುವತಿಯೊಬ್ಬಳೊಂದಿಗೆ ಜಾಗ್ವಾರ್ ಕಾರಿನಲ್ಲಿ ಬಂದಿದ್ದ ಎನ್ನಲಾಗಿದೆ.
ಮದ್ಯದ ಅಮಲಿನಲ್ಲಿದ್ದ ಆತ ಕಾರನ್ನು ನಿಯಂತ್ರಣ ತಪ್ಪಿ ಚಲಾಯಿಸಿದ್ದು, ಮೊದಲು ಪೆಟ್ರೋಲ್ ಬಂಕ್ ಸಿಬ್ಬಂದಿ ಗುಡ್ಡು ಕುಮಾರ್ಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಕಾರು ನೇರವಾಗಿ ಪೆಟ್ರೋಲ್ ಪಂಪ್ಗೆ ರಭಸವಾಗಿ ಅಪ್ಪಳಿಸಿದೆ.
ಡಿಕ್ಕಿಯ ರಭಸಕ್ಕೆ ಕಿಡಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲೇ ಕಾರು ಹಾಗೂ ಪೆಟ್ರೋಲ್ ಪಂಪ್ಗೆ ಬೆಂಕಿ ವ್ಯಾಪಿಸಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಯುವಕ ಮತ್ತು ಯುವತಿ ತಕ್ಷಣ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನ ಡಿಕ್ಕಿಯಿಂದ ಪೆಟ್ರೋಲ್ ಬಂಕ್ ಸಿಬ್ಬಂದಿ ಗುಡ್ಡು ಕುಮಾರ್ ಅವರ ಕಾಲಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R