
ಕೋಲಾರ, 07 ಅಕ್ಟೋಬರ್: (ಹಿ.ಸ) :
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಪ್ರವೀಣ್ ಪಿ. ಬಾಗೇವಾಡಿರವರು ಮಾಲೂರು ತಾಲ್ಲೂಕಿನ ಹುಂಗೇನಹಳ್ಳಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ವಿಬಿಜಿರಾಮ್ಜಿ ಹಾಗೂ ಜೆಜೆಎಂ ಕಾಮಗಾರಿಗಳ ಪರಿಶೀಲಿಸಿದರು. ಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ಹಾಗೂ ಸರ್ಕಾರಿ ಯೋಜನೆಗಳ ಸೌಲಭ್ಯಗಳು ತಳಮಟ್ಟದಲ್ಲಿ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿರುವ ಬಗ್ಗೆ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲಿಸಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಬಿಜಿರಾಮ್ಜಿ ಯೋಜನೆಯಡಿ ರೈತರಿಗೆ ಅನುಕೂಲವಾಗುವಂತೆ ನಿರ್ಮಿಸಲಾಗುತ್ತಿರುವ ದನದ ಶೆಡ್ಗಳನ್ನು ವೀಕ್ಷಿಸಿದರು. ಆನಂತರ, ಚಿಕ್ಕಸಬ್ಬೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಪ್ರಗತಿಯಲ್ಲಿರುವ ಕೃಷಿ ಹೊಂಡ ನಿರ್ಮಾಣ ಕಾಮಗಾರಿಯನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಕಾಮಗಾರಿಗಳಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ, ನಿಯಮಾನುಸಾರ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ನಿಗದಿತ ಸಮಯದೊಳಗೆ ಪೂರ್ಣಗೊಳಿಸುವಂತೆ ಸಂಬAಧಪಟ್ಟ ತಾಂತ್ರಿಕ ಸಿಬ್ಬಂದಿಗೆ ನಿರ್ದೇಶನ ನೀಡಿದರು. ಬರಗಾಲ ಹಿನ್ನೆಲೆಯಲ್ಲಿ ವಿಬಿಜಿರಾಮ್ಜಿ ಯೋಜನೆಯಡಿ ಹೆಚ್ಚಿನ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಕೈಗೊಂಡು ಹೆಚ್ಚಿನ ಮಾನವ ದಿನಗಳ ಸೃಜನೆಗೆ ಸೂಚಿಸಿದರು.
ಮೂಲಸೌಕರ್ಯ ಪರಿಶೀಲನೆ: ನಂತರ ಹುಂಗೇನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೇಂದ್ರದಲ್ಲಿ ಮಕ್ಕಳ ದಿನನಿತ್ಯದ ಹಾಜರಾತಿಯನ್ನು ಪರಿಶೀಲಿಸಿದರು. ಮಕ್ಕಳಿಗೆ ವಿತರಿಸಲಾಗುವ ಪೌಷ್ಟಿಕ ಆಹಾರದ ದಾಸ್ತಾನು ಹಾಗೂ ಅದರ ಗುಣಮಟ್ಟವನ್ನು ಸ್ವತಃ ಪರಿಶೀಲಿಸಿದ ಅವರು, ಕೇಂದ್ರದಲ್ಲಿ ಲಭ್ಯವಿರುವ ಮೂಲಸೌಕರ್ಯ, ನೈರ್ಮಲ್ಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ವೀಕ್ಷಿಸಿದರು.
ಈ ವೇಳೆ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಗಳಲ್ಲಿ ಬೆಳೆಯುವ ಮಕ್ಕಳಿಗೆ ಸೂಕ್ತ ವಾತಾವರಣ, ಸುರಕ್ಷತೆ ಮತ್ತು ಉತ್ತಮ ಮೂಲಸೌಕರ್ಯಗಳನ್ನು ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು. ಮಕ್ಕಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ತಕ್ಷಣವೇ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸರ್ಕಾರದ ಮಹತ್ವಾಕಾಂಕ್ಷೆಯ 'ಜಲ ಜೀವನ್ ಮಿಷನ್' ಯೋಜನೆಯಡಿ ಗ್ರಾಮದಲ್ಲಿ ಕೈಗೊಳ್ಳಲಾಗಿರುವ ಮನೆ-ಮನೆಗೆ ನಳ ಸಂಪರ್ಕ ಕಾಮಗಾರಿಗಳನ್ನು ಡಾ. ಪ್ರವೀಣ್ ಪಿ. ಬಾಗೇವಾಡಿ ಅವರು ವೀಕ್ಷಿಸಿದರು. ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ತಲುಪುತ್ತಿದೆಯೇ ಎಂಬುದನ್ನು ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿ ಖಚಿತಪಡಿಸಿಕೊಂಡರು. ಯೋಜನೆ ಪೂರ್ಣಗೊಂಡ ಕಡೆಗಳಲ್ಲಿ ನಿರಂತರ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಲು ಸೂಚಿಸಿದರು.
ಭೇಟಿ ಸಮಯದಲ್ಲಿ ಮಾಲೂರು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿ ಕೃಷ್ಣಪ್ಪ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಬಿವುಲ್ಲಾ, ಹುಂಗೇನಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ನಾಯಕ್ ಹಾಗೂ ವಿಬಿಜಿರಾಮ್ಜಿ ಯೋಜನೆಯ ತಾಲ್ಲೂಕು ಮತ್ತು ಗ್ರಾಮ ಮಟ್ಟದ ಸಿಬ್ಬಂದಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್