
ಬೆಂಗಳೂರು, 08 ಅಕ್ಟೋಬರ್ (ಹಿ.ಸ.):
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಸುಗಮಗೊಳಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹೊಸ ಬಸ್ ನಿಲ್ದಾಣಗಳ ವ್ಯವಸ್ಥೆ ಮಾಡಿವೆ. ಅ.6ರಿಂದ ಈ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ.
ನೇರಳೆ ಮಾರ್ಗದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಎರಡು ಹೊಸ ಬಸ್ ನಿಲ್ದಾಣಗಳನ್ನು ಕಲ್ಪಿಸಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಭಾಗದಲ್ಲಿರುವ ‘ಬಿ’ ಪ್ರವೇಶದ್ವಾರದ ಸಮೀಪ, ಇಂಡಿಯನ್ ಎಕ್ಸ್ಪ್ರೆಸ್ ಕಡೆಯಿಂದ ಬಂದು ಅನಿಲ್ ಕುಂಬ್ಳೆ ವೃತ್ತದ ಮೂಲಕ ಶಾಂತಿನಗರದ ಕಡೆಗೆ ತೆರಳುವ ಬಸ್ಗಳಿಗೆ ನಿಲ್ದಾಣ ವ್ಯವಸ್ಥೆ ಮಾಡಲಾಗಿದೆ.
ಅದೇ ರೀತಿ, ಅನಿಲ್ ಕುಂಬ್ಳೆ ವೃತ್ತದ ಕಡೆಯಿಂದ ಲೋಕ ಭವನ (ರಾಜಭವನ) ಕಡೆಗೆ ತೆರಳುವ ಬಸ್ಗಳಿಗಾಗಿ ಮೆಟ್ರೋ ನಿಲ್ದಾಣದ ‘ಸಿ’ ಪ್ರವೇಶದ್ವಾರದ ಸಮೀಪ ಮತ್ತೊಂದು ನಿಲ್ದಾಣ ಕಲ್ಪಿಸಲಾಗಿದೆ.
ಇದಲ್ಲದೆ, ಮುಂಬರುವ ಗುಲಾಬಿ ಮಾರ್ಗದ ತಾವರೆಕೆರೆ ಮೆಟ್ರೋ ನಿಲ್ದಾಣದ ಬಳಿಯೂ ಬಸ್ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ.
ಡೈರಿ ಸರ್ಕಲ್ನಿಂದ ಬನ್ನೇರುಘಟ್ಟದ ಕಡೆಗೆ ಹಾಗೂ ಜಯದೇವ ಆಸ್ಪತ್ರೆ ಕಡೆಯಿಂದ ಡೈರಿ ಸರ್ಕಲ್ ಕಡೆಗೆ ಸಂಚರಿಸುವ ಬಸ್ಗಳಿಗೆ ಇದು ಅನುಕೂಲವಾಗಲಿದೆ.
BMRCL ಮತ್ತು BMTC ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಈ ವ್ಯವಸ್ಥೆ ಜಾರಿಗೆ ತರಲಾಗಿದೆ.
ಮೆಟ್ರೋ ಹಾಗೂ ಬಸ್ ಸೇವೆಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ಮೂಲಕ ಪ್ರಯಾಣಿಕರಿಗೆ ಸಾರ್ವಜನಿಕ ಸಾರಿಗೆಯ ಬಳಕೆ ಸುಲಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರು ಹೊಸ ಬಸ್ ನಿಲ್ದಾಣಗಳ ಸದುಪಯೋಗ ಪಡೆದುಕೊಳ್ಳುವಂತೆ ಮೆಟ್ರೋ ಅಧಿಕಾರಿಗಳು ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R