
ಗದಗ, 08 ಅಕ್ಟೋಬರ್ (ಹಿ.ಸ.)
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕೇವಲ ಓದು, ಬರವಣಿಗೆ, ಮನೆಕೆಲಸಗಳಿಗೆ ಸೀಮಿತವಾಗದೆ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಜೀವನದ ಮಾನಸಿಕ ಒತ್ತಡ ಕಡಿಮೆಯಾಗಿ ಸರ್ವಾಂಗೀಣ ವಿಕಾಸ ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಅವರು ಹೇಳಿದರು.
ನಗರದ ಗದಗ-ಬೆಟಗೇರಿಯ ಲೊಯಲಾ ಪ್ರಾಥಮಿಕ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಇವರ ಸಹಯೋಗದಲ್ಲಿ 2026-27ನೇ ಸಾಲಿನ ಬೆಳಗಾವಿ ವಿಭಾಗ ಮಟ್ಟದ 14/17 ವಯೋಮಿತಿಯ ಬಾಲಕ ಬಾಲಕಿಯರ ಬಾಸ್ಕೆಟ್ಬಾಲ್ ಕ್ರೀಡಾಕೂಟ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಲ್ಲಿ ವ್ಯಕ್ತಿಗತ ಆಟಗಳಿಗಿಂತ ತಂಡದ ಆಟಗಳು ಹೆಚ್ಚು ಸವಾಲಿನದ್ದಾಗಿರುತ್ತವೆ. ಇಲ್ಲಿ ಎಲ್ಲರೂ ಒಂದಾಗಿ, ಪರಸ್ಪರ ಸಾಮರಸ್ಯದಿಂದ ಆಡುವುದು ಮತ್ತು ಒಗ್ಗಟ್ಟಿನಿಂದ ಆಲೋಚಿಸುವುದು ಅತ್ಯಗತ್ಯ ಎಂದರು.
ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ: ಕ್ರೀಡೆಯಲ್ಲಿ ಗೆಲುವು ಅಥವಾ ಸೋಲು ಒಂದು ಘಟನೆ ಅಷ್ಟೇ, ಆದರೆ ಪಂದ್ಯಾವಳಿಯಲ್ಲಿ ಭಾಗವಹಿಸುವ ಪ್ರಕ್ರಿಯೆ ಮತ್ತು ಕ್ರೀಡಾ ಮನೋಭಾವ ಮುಖ್ಯ. ಸೋತ ತಕ್ಷಣವೇ ಕ್ರೀಡಾಪಟುಗಳು ನಿರಾಶರಾಗಬಾರದು. ಆಯಾ ದಿನದ ಪ್ರದರ್ಶನ ಗೆಲುವನ್ನು ನಿರ್ಧರಿಸುತ್ತದೆಯೇ ಹೊರತು, ಕ್ರೀಡಾಪಟುವಿನ ಪ್ರತಿಭೆಯನ್ನಲ್ಲ. ಕ್ರೀಡೆಯಲ್ಲಿ ಸದಾ ಸುಧಾರಣೆಗೆ ಅವಕಾಶವಿರುತ್ತದೆ ಎಂದು ಸ್ಪೂರ್ತಿ ತುಂಬಿದರು.
ಕ್ರೀಡಾಕೂಟವನ್ನು ಆಯೋಜಿಸಿದ ಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯವಸ್ಥೆಯನ್ನು ಶ್ಲಾಘಿಸಿದ ಅವರು, ಕ್ರೀಡಾಪಟುಗಳು ಮುಕ್ತ ಮನಸ್ಸಿನಿಂದ ಆಟವನ್ನು ಆನಂದಿಸಿ, ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕೆಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ವಿದ್ಯಾರ್ಥಿಗಳಿಗೆ ಹಾರೈಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ (ಡಿಡಿಪಿಐ) ಆರ್. ಎಸ್. ಬುರಡಿ ಮಾತನಾಡಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಶಿಕ್ಷಣ ಮತ್ತು ರಕ್ಷಣೆಯ ಜೊತೆಗೆ ಕ್ರೀಡೆಗಳು ಅತ್ಯಂತ ಅಗತ್ಯ. ಕ್ರೀಡಾ ಚಟುವಟಿಕೆಗಳು ಮಕ್ಕಳಲ್ಲಿ ಶಿಸ್ತು, ಸಮಯ ಪಾಲನೆ, ಸಮನ್ವಯತೆ ಸಕ್ರಿಯ ಭಾಗಿತ್ವ ಹಾಗೂ ಸೋಲನ್ನು ಮೆಟ್ಟಿ ನಿಲ್ಲುವ ಆತ್ಮವಿಶ್ವಾಸವನ್ನು ಬೆಳೆಸುತ್ತವೆ ಎಂದು ಹೇಳಿದರು.
ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುವುದಲ್ಲದೆ, ದುರಭ್ಯಾಸಗಳಿಂದ ದೂರವಿರಲು ಸಾಧ್ಯವಾಗುತ್ತದೆ. ಕ್ರೀಡೆಯು ನಿಯಮಬದ್ಧ ಶಿಸ್ತು ಹಾಗೂ ಸಮಯ ಪ್ರಜ್ಞೆಯನ್ನು ಕಲಿಸುತ್ತದೆ. ಜೀವನದಲ್ಲಿ ಎದುರಾಗುವ ಸೋಲಿನಿಂದ ಹೇಗೆ ಹೊರಬಂದು ಮತ್ತೆ ಸಾಧನೆ ಮಾಡಬೇಕೆಂಬ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದರು.
ಶಾಲಾ, ತಾಲೂಕು ಮತ್ತು ಜಿಲ್ಲಾ ಮಟ್ಟವನ್ನು ದಾಟಿ ವಿಭಾಗ ಮಟ್ಟಕ್ಕೆ ಬಂದಿರುವ ಕ್ರೀಡಾಪಟುಗಳು ಮುಂದೆ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿಯುವ ಮಟ್ಟಕ್ಕೆ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ಬಂದಿರುವ ಎಲ್ಲಾ ಕ್ರೀಡಾಪಟುಗಳು ಕ್ರೀಡಾ ನಿಯಮಗಳಿಗೆ ಬದ್ಧರಾಗಿ, ಸೌಹಾರ್ದಯುತವಾಗಿ ಪಂದ್ಯಗಳಲ್ಲಿ ಭಾಗವಹಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್. ಎಸ್. ಬುರಡಿ ಆಶಿಸಿದರು.
ಕೆಕೆಪಿಪಿಜಿ ಸಂಗೀತ ಪಾಠ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಗೀತೆ ಮತ್ತು ನಾಡಗೀತೆ ಪ್ರಸ್ತುತ ಪಡಿಸಿದರು. ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್.ಎಸ್ ಬುರಡಿ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಎಮ್.ಎಸ್. ಕುಚಬಾಳ ನಿರೂಪಿಸಿದರು. ಶಿವಕುಮಾರ ಕುರಿಯವರು ಕಾರ್ಯಕ್ರಮವನ್ನು ವಂದಿಸಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಗಂಗಪ್ಪ ಎಂ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ, ಡಿವೈಪಿಸಿ ಎಮ್.ಎಚ್. ಕಂಬಳಿ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಎಸ್. ಡಿ. ಕನವಳ್ಳಿ, ಡಿ ವೈ ಪಿ ಸಿ. ರವಿ ಪ್ರಕಾಶ, ಡಿಪಿಓ ಶ್ರೀಮತಿ ಗಾಯಿತ್ರಿ ದೇವಿ ಎಮ್, ಬಿಇಓ ವಿ.ವಿ ನಡುವಿನ ಮನಿ, ಇಓ ಎಮ್.ಪಿ ಗೊಟೂರು, ಲೊಯಲಾ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲೆವಿನಾ, ಎಚ್.ಬಿ. ರಡ್ಡೆರ, ಎಮ್ ಎಚ್. ಸವದತ್ತಿ, ಲೊಯಲಾ ವೆನಿಗ್ನಾ, ಸೇರಿದಂತೆ ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರು ವಿವಿಧ ಶಾಲೆಗಳ ಕ್ರೀಡಾಪಟುಗಳು,ತರಬೇತುದಾರರು, ಶಿಕ್ಷಕರು ಹಾಗೂ ಸಂಘಟಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP