ವಿಬಿಜಿ-ರಾಮ್-ಜಿ ಯೋಜನೆಯಡಿ ಅಳತೆಗೆ ತಕ್ಕಂತೆ ಕೂಲಿ ಪಡೆಯಿರಿ: ವೀರಭದ್ರಪ್ಪ
ಗದಗ, 08 ಅಕ್ಟೋಬರ್ (ಹಿ.ಸ.) ವಿಬಿಜಿ-ರಾಮ್-ಜಿ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ ದೊರೆಯುವ 125 ದಿನಗಳ ಉದ್ಯೋಗಾವಕಾಶವನ್ನು ಅರ್ಹರು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಕೈಗೆತ್ತಿಕೊಳ್ಳುವ ಕಾಮಗಾರಿಯಲ್ಲಿ ಅಳತೆಗೆ ತಕ್ಕಂತೆ ಕೂಲಿ ಪಾವತಿಯಾಗಲಿದ್ದು, ಕೆಲಸದ ಅಗತ್ಯವಿರುವವರು ನಮೂನೆ-6 ಸಲ್ಲಿಸಿ
ಫೋಟೋ


ಗದಗ, 08 ಅಕ್ಟೋಬರ್ (ಹಿ.ಸ.)

ವಿಬಿಜಿ-ರಾಮ್-ಜಿ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ ದೊರೆಯುವ 125 ದಿನಗಳ ಉದ್ಯೋಗಾವಕಾಶವನ್ನು ಅರ್ಹರು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಕೈಗೆತ್ತಿಕೊಳ್ಳುವ ಕಾಮಗಾರಿಯಲ್ಲಿ ಅಳತೆಗೆ ತಕ್ಕಂತೆ ಕೂಲಿ ಪಾವತಿಯಾಗಲಿದ್ದು, ಕೆಲಸದ ಅಗತ್ಯವಿರುವವರು ನಮೂನೆ-6 ಸಲ್ಲಿಸಿ ತಮ್ಮ ಬೇಡಿಕೆಯನ್ನು ದಾಖಲಿಸಿಕೊಳ್ಳಬೇಕು ಎಂದು ಡಿಐಇಸಿ ವೀರಭದ್ರಪ್ಪ ಸಜ್ಜನ ಹೇಳಿದರು.

ಗದಗ ಜಿಲ್ಲೆ ರೋಣ ತಾಲೂಕಿನ ಯಾವಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿಜಿ-ರಾಮ್-ಜಿ ಯೋಜನೆಯಡಿ ನಡೆಯುತ್ತಿರುವ ಕೆರೆ ಪುನಶ್ಚೇತನ ಕಾಮಗಾರಿಯ ಎರಡನೇ ದಿನದ ಸಂದರ್ಭದಲ್ಲಿ ಆಯೋಜಿಸಿದ್ದ ಐಇಸಿ ಸಭೆಯಲ್ಲಿ ಅವರು ಮಾತನಾಡಿದರು.

ಯೋಜನೆಯಡಿ ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವುದರ ಜತೆಗೆ ಗ್ರಾಮದ ಅಗತ್ಯಕ್ಕೆ ಅನುಗುಣವಾಗಿ ಕೆರೆ ಪುನಶ್ಚೇತನ, ನೀರು ಸಂರಕ್ಷಣೆ ಹಾಗೂ ಸಾರ್ವಜನಿಕ ಬಳಕೆಯ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇಂತಹ ಕಾಮಗಾರಿಗಳಲ್ಲಿ ಸ್ಥಳೀಯ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಉದ್ಯೋಗದ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರಿಗೆ ಯೋಜನೆಯ ನಿಯಮಗಳು, ಕೆಲಸದ ಬೇಡಿಕೆ ಸಲ್ಲಿಸುವ ವಿಧಾನ, ಹಾಜರಾತಿ, ಕೂಲಿ ಪಾವತಿ ಸೇರಿದಂತೆ ವಿವಿಧ ಅಂಶಗಳ ಕುರಿತು ಮಾಹಿತಿ ನೀಡಲಾಯಿತು. ಕಾರ್ಮಿಕರು ನಿರ್ವಹಿಸುವ ಕೆಲಸದ ಪ್ರಮಾಣಕ್ಕೆ ಅನುಗುಣವಾಗಿ ಅಳತೆ ಕೈಗೊಂಡು ಅದರ ಆಧಾರದ ಮೇಲೆ ಕೂಲಿ ಪಾವತಿಸಲಾಗುತ್ತದೆ. ಹೀಗಾಗಿ ಕಾಮಗಾರಿಯ ವೇಳೆ ನಿಗದಿತ ಅಳತೆಯಂತೆ ಕೆಲಸ ನಿರ್ವಹಿಸುವಂತೆ ತಿಳಿಸಲಾಯಿತು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಐ.ಎಫ್,ಬೊದ್ಲೆಖಾನ ಮಾತಾನಾಡಿ ಕೆಲಸದ ಅವಶ್ಯಕತೆ ಇರುವ ಕುಟುಂಬಗಳು ಗ್ರಾಮ ಪಂಚಾಯಿತಿಗೆ ನಮೂನೆ-6 ಸಲ್ಲಿಸುವ ಮೂಲಕ ಉದ್ಯೋಗದ ಬೇಡಿಕೆ ಇಡಬೇಕು. ಕೇವಲ ಮೌಖಿಕವಾಗಿ ಕೆಲಸ ಕೇಳುವುದಕ್ಕಿಂತ ಅಧಿಕೃತವಾಗಿ ನಮೂನೆ-6 ಸಲ್ಲಿಸಿ ಬೇಡಿಕೆ ದಾಖಲಿಸಿಕೊಳ್ಳುವುದರಿಂದ ಉದ್ಯೋಗ ಕಲ್ಪಿಸುವ ಪ್ರಕ್ರಿಯೆಗೆ ಅನುಕೂಲವಾಗಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಕೆರೆ ಪುನಶ್ಚೇತನ ಕಾಮಗಾರಿಯಿಂದ ಕಾರ್ಮಿಕರಿಗೆ ಉದ್ಯೋಗ ದೊರೆಯುವುದರ ಜತೆಗೆ ಗ್ರಾಮದ ಪ್ರಮುಖ ಜಲಮೂಲ ಅಭಿವೃದ್ಧಿಯಾಗಲಿದೆ. ಮಳೆಗಾಲದಲ್ಲಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೆಚ್ಚಿಸುವುದು, ಅಂತರ್ಜಲ ಮಟ್ಟ ಸುಧಾರಿಸುವುದು ಹಾಗೂ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ನೀರಿನ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಕಾಮಗಾರಿಗಳು ಮಹತ್ವದ್ದಾಗಿವೆ ಎಂದು ವಿವರಿಸಲಾಯಿತು.

ಯೋಜನೆಯ ಕುರಿತು ಗ್ರಾಮಸ್ಥರಿಗೆ ಸಂಪೂರ್ಣ ಮಾಹಿತಿ ತಲುಪಿಸುವ ಉದ್ದೇಶದಿಂದ ಕಾಮಗಾರಿ ಸ್ಥಳದಲ್ಲೇ ಐಇಸಿ ಸಭೆ ನಡೆಸಲಾಯಿತು. ಕಾರ್ಮಿಕರು ಹಾಗೂ ಗ್ರಾಮಸ್ಥರು ಕೇಳಿದ ಪ್ರಶ್ನೆಗಳಿಗೆ ಸಿಬ್ಬಂದಿ ಮಾಹಿತಿ ನೀಡಿದರು. ಯೋಜನೆಯಡಿ ದೊರೆಯುವ ಅವಕಾಶಗಳು ಹಾಗೂ ತಮ್ಮ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಕರೆ ನೀಡಲಾಯಿತು.

ಈ ಸಂದರ್ಭದಲ್ಲಿ ಯಾವಗಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ತಾಲೂಕ ಐಇಸಿ, ಮೌನೇಶ ದಂಡಿನ ಸೇರಿದಂತೆ ಕೂಲಿ ಕಾರ್ಮಿಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande