ಎಸ್ಐಆರ್ ಪ್ರಕ್ರಿಯೆ ಚುರುಕುಗೊಳಿಸಲು 1,117 ಸಹಾಯಕ ಚುನಾವಣಾಧಿಕಾರಿಗಳ ನೇಮಕ
ಬೆಂಗಳೂರು, 07 ಅಕ್ಟೋಬರ್ (ಹಿ.ಸ.): ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಚುರುಕುಗೊಳಿಸಲು ಹೆಚ್ಚುವರಿಯಾಗಿ 1,117 ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳನ್ನು (ಎಇಆರ್ಒ) ನೇಮಕ ಮಾಡಲಾಗಿದೆ ಎ
gbA-election-department-special-commissioner-shilpa-nag


ಬೆಂಗಳೂರು, 07 ಅಕ್ಟೋಬರ್ (ಹಿ.ಸ.):

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಚುರುಕುಗೊಳಿಸಲು ಹೆಚ್ಚುವರಿಯಾಗಿ 1,117 ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳನ್ನು (ಎಇಆರ್ಒ) ನೇಮಕ ಮಾಡಲಾಗಿದೆ ಎಂದು ಜಿಬಿಎ ಚುನಾವಣಾ ವಿಭಾಗದ ವಿಶೇಷ ಆಯುಕ್ತೆ ಶಿಲ್ಪಾ ನಾಗ್ ತಿಳಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಮತದಾರರ ಪಟ್ಟಿಯ ಎಸ್ಐಆರ್ಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳ ಕುರಿತು ಮಾಹಿತಿ ನೀಡಿದ ಅವರು, ಜಿಬಿಎ ವ್ಯಾಪ್ತಿಯಲ್ಲಿ ವಿಚಾರಣೆಗಾಗಿ 814 ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಹೊಸದಾಗಿ 1,117 ಅಧಿಕಾರಿಗಳ ನೇಮಕದೊಂದಿಗೆ ಒಟ್ಟು 1,193 ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಎಸ್ಐಆರ್ ಸಂದರ್ಭದಲ್ಲಿ ‘ಮ್ಯಾಪ್ ಮಾಡಲಾಗಿಲ್ಲ’ ಅಥವಾ ‘ತಾರ್ಕಿಕ ವ್ಯತ್ಯಾಸ’ದ ಕಾರಣಕ್ಕೆ ನೋಟಿಸ್ ನೀಡಲಾಗಿದ್ದರೆ, ಸಂಬಂಧಪಟ್ಟ ಮತದಾರರು ವಿಚಾರಣೆಗೆ ಖುದ್ದಾಗಿ ಹಾಜರಾಗುವ ಅಗತ್ಯವಿಲ್ಲ.

ಚುನಾವಣಾ ನೋಂದಣಿ ಅಧಿಕಾರಿಗಳು ಅಥವಾ ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಮನೆಗೆ ತೆರಳಿ ಅಗತ್ಯ ದಾಖಲೆಗಳನ್ನು ಪಡೆದು ಪರಿಶೀಲಿಸಿ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲಿದ್ದಾರೆ ಎಂದು ಶಿಲ್ಪಾ ನಾಗ್ ತಿಳಿಸಿದರು. ವಿಶೇಷ ಸಂದರ್ಭಗಳಲ್ಲಿ ಆನ್ಲೈನ್ ವಿಚಾರಣೆಯನ್ನೂ ನಡೆಸಲು ಅವಕಾಶವಿದೆ ಎಂದರು.

ಜಿಬಿಎ ವ್ಯಾಪ್ತಿಯಲ್ಲಿ 56 ಲಕ್ಷಕ್ಕೂ ಅಧಿಕ ಮತದಾರರಿದ್ದು, 24 ಲಕ್ಷಕ್ಕೂ ಹೆಚ್ಚು ನೋಟಿಸ್ಗಳನ್ನು ನೀಡಲಾಗಿದೆ.

ಈಗಾಗಲೇ ಎಲ್ಲ ನೋಟಿಸ್ಗಳನ್ನು ತಲುಪಿಸಲಾಗಿದ್ದು, “ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಶಿಲ್ಪಾ ನಾಗ್ ಹೇಳಿದರು.

ಪ್ರಸ್ತುತ 3,70,329 ನೋಟಿಸ್ಗಳ ವಿಚಾರಣೆ ಬಾಕಿ ಇದೆ. ಅಲ್ಲದೆ, ನಮೂನೆ–6, 7 ಮತ್ತು 8ಕ್ಕೆ ಸಂಬಂಧಿಸಿದಂತೆ ಒಟ್ಟು 5,42,893 ಅರ್ಜಿಗಳು ಸ್ವೀಕರಿಸಲಾಗಿದ್ದು, 1,02,712 ಅರ್ಜಿಗಳನ್ನು ಅಂಗೀಕರಿಸಲಾಗಿದೆ.

3,89,698 ಅರ್ಜಿಗಳು ಬಾಕಿ ಉಳಿದಿದ್ದು, ಚುನಾವಣಾ ಆಯೋಗದ ನಿಯಮಗಳಂತೆ ಅವುಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳದ ಅರ್ಹರಿಗೆ ಅನುಕೂಲವಾಗುವಂತೆ ವಿಶೇಷ ಅಭಿಯಾನಗಳು ಮತ್ತು ಶಿಬಿರಗಳನ್ನು ಆಯೋಜಿಸಲಾಗುವುದು.

ಕರ್ನಾಟಕದ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸುವ ವೇಳಾಪಟ್ಟಿ ನಿಗದಿಯಾಗಿದೆ ಎಂದು ಶಿಲ್ಪಾ ನಾಗ್ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande