
ಬೆಂಗಳೂರು, 07 ಅಕ್ಟೋಬರ್ (ಹಿ.ಸ.):
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವೇಳೆ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಿದೆ.
ಈ ಹಿನ್ನೆಲೆಯಲ್ಲಿ ಅ.8ರಂದು ನಗರದ ಫ್ರೀಡಂ ಪಾರ್ಕ್ನಲ್ಲಿ ‘ಚಪ್ಪಲಿ ಚಳವಳಿ’ ಆಯೋಜಿಸಲಾಗಿದೆ.
ನಾಗರಿಕ ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೊದಲು ‘ಪೀಪಲ್ಸ್ ಟ್ರಿಬ್ಯುನಲ್’ ನಡೆಯಲಿದ್ದು, ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದಾಗಿ ಹೇಳುವವರು ತಮ್ಮ ಅಹವಾಲುಗಳನ್ನು ಮಂಡಿಸಲಿದ್ದಾರೆ.
ಬಳಿಕ ‘ಚಪ್ಪಲಿ ಚಳವಳಿ’ ನಡೆಯಲಿದೆ. ಕಾರ್ಯಕ್ರಮ ಬೆಳಿಗ್ಗೆ 10.30ಕ್ಕೆ ಆರಂಭವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ತೆಗೆದುಹಾಕಲಾಗಿದೆ ಎಂದು ಆರೋಪಿಸಲಾಗಿರುವ ಮತದಾರರ ಹೆಸರುಗಳನ್ನು ಮರುಸ್ಥಾಪಿಸಬೇಕು ಹಾಗೂ ಹಿಂದಿನ ಮತದಾರರ ಪಟ್ಟಿಯನ್ನು ಉಳಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಾಗಿವೆ.
ಈ ಪ್ರತಿಭಟನೆಯಲ್ಲಿ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಸೇರಿದಂತೆ ವಿವಿಧ ನಾಗರಿಕ ಸಂಘಟನೆಗಳು, ಕಾರ್ಯಕರ್ತರು ಮತ್ತು ಯುವಜನರು ಭಾಗವಹಿಸುವ ನಿರೀಕ್ಷೆಯಿದೆ.
ಎಸ್ಐಆರ್ ಕುರಿತು ಸಾರ್ವಜನಿಕರ ಅಹವಾಲುಗಳನ್ನು ದಾಖಲಿಸುವ ಉದ್ದೇಶದಿಂದ ‘ಪೀಪಲ್ಸ್ ಟ್ರಿಬ್ಯುನಲ್’ ಆಯೋಜಿಸಲಾಗಿದೆ. “ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಿರುವ ಕುರಿತು ಜನರ ಅಹವಾಲುಗಳನ್ನು ಆಲಿಸಿ, ಈ ವಿಚಾರದಲ್ಲಿ ಸಾರ್ವಜನಿಕ ಗಮನ ಸೆಳೆಯುವುದು ಪ್ರತಿಭಟನೆಯ ಉದ್ದೇಶ” ಎಂದು ಆಯೋಜಕರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R