
ಮುಳಬಾಗಿಲು, 06 ಅಕ್ಟೋಬರ್ (ಹಿ.ಸ): ಐದು ನೂರು ವರ್ಷಗಳ ಹಿಂದೆಯೇ ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ಯೋಜನಾಬದ್ಧವಾಗಿ ನಿರ್ಮಿಸಿ, ಉದ್ಯಾನವನಗಳು ಹಾಗೂ ಸಾವಿರಾರು ಕೆರೆಗಳನ್ನು ನಿರ್ಮಿಸುವ ಮೂಲಕ ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡಿದ್ದರು. ಅವರ ದೂರದೃಷ್ಟಿಯ ನಗರ ನಿರ್ಮಾಣ ಪರಿಕಲ್ಪನೆಯೇ ಇಂದಿನ ಸ್ಮಾರ್ಟ್ ಸಿಟಿ ಚಿಂತನೆಗೆ ಮಾದರಿಯಾಗಿದೆ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವದೂತ ಮಹಾಸ್ವಾಮೀಜಿ ಎಂದು ತಿಳಿಸಿದರು.
ಮುಳಬಾಗಿಲು ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನೇತಾಜಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೆಂಪೇಗೌಡರ ಹಾದಿಯಲ್ಲಿ ಸಮುದಾಯದಿಂದ ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸಿರುವ ಹಲವು ಮಹನೀಯರ ಕೊಡುಗೆ ಅಮೂಲ್ಯವಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮದೇ ರೀತಿಯಲ್ಲಿ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ, ನೀರಾವರಿ ಯೋಜನೆಗಳ ಅನುಷ್ಠಾನಕ್ಕೂ ಒತ್ತು ನೀಡುತ್ತಿದ್ದಾರೆ ಎಂದು ಹೇಳಿದರು.
ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದ ಸ್ವಾಮೀಜಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಿರ್ಮಾಣದ ಮೂಲಕ ದೂರದೃಷ್ಟಿ, ಆಡಳಿತ ಕೌಶಲ ಹಾಗೂ ಜನಪರ ಚಿಂತನೆಗೆ ಮಾದರಿಯಾಗಿದ್ದಾರೆ. ಅವರ ಅಭಿವೃದ್ಧಿ ಪರಿಕಲ್ಪನೆ, ಸಾಮಾಜಿಕ ಕಾಳಜಿ ಹಾಗೂ ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ. ಯುವಜನತೆ ಕೆಂಪೇಗೌಡರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನ0ದನಾಥ ಸ್ವಾಮೀಜಿ ಮಾತನಾಡಿ, ಕೆಲ ವರ್ಷಗಳ ಹಿಂದೆ ಮುಳಬಾಗಿಲಿನಲ್ಲಿ ಕೆಂಪೇಗೌಡ ಜಯಂತಿಯನ್ನು ಆಚರಿಸಲಾಗುತ್ತಿತ್ತು, ಇದೀಗ ಹೆಚ್ಚಿನ ವೈಭವದಿಂದ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ಸಂಗತಿ, ಆದರೆ ಜಯಂತಿಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸದೆ ಪ್ರತಿವರ್ಷವೂ ಅರ್ಥಪೂರ್ಣವಾಗಿ ಆಚರಿಸಬೇಕು, ಕೆಂಪೇಗೌಡರ ಆಶಯಗಳನ್ನು ಈಡೇರಿಸುವ ಸಂಕಲ್ಪದೊAದಿಗೆ ಸಮಾಜ ಹಾಗೂ ದೇಶ ಕಟ್ಟುವ ಕಾರ್ಯದಲ್ಲಿ ಪ್ರತಿಯೊಬ್ಬರೂ ತೊಡಗಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ವೈಜ್ಞಾನಿಕ ಹಾಗೂ ಸಾಮಾಜಿಕ ದೃಷ್ಟಿಕೋನದಿಂದ ನಿರ್ಮಿಸಿದ ಬೆಂಗಳೂರು ಇಂದು ಕೋಟ್ಯಂತರ ಜನರಿಗೆ ಬದುಕು ಕಟ್ಟಿಕೊಟ್ಟಿದೆ. ಬರದಂತಹ ಪರಿಸ್ಥಿತಿಗಳ ನಡುವೆಯೂ ಬೆಂಗಳೂರಿನ ಜನರಿಗೆ ನೀರಿನ ಸಮಸ್ಯೆ ಸೇರಿದಂತೆ ಹಲವು ಮೂಲಭೂತ ತೊಂದರೆಗಳು ಕಡಿಮೆಯಾಗಿರುವುದರ ಹಿಂದೆ ಕೆಂಪೇಗೌಡರ ದೂರದೃಷ್ಟಿಯ ನಗರ ನಿರ್ಮಾಣದ ಪರಿಕಲ್ಪನೆ ಇದೆ ಎಂದರು.
ಬೆAಗಳೂರು ನಿರಂತರವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ತಕ್ಕಂತೆ ಮೂಲಸೌಕರ್ಯಗಳನ್ನು ತ್ವರಿತವಾಗಿ ಒದಗಿಸುವ ಅಗತ್ಯವಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಎದುರಾಗಬಹುದು. ಈ ಕುರಿತು ಆಡಳಿತ ವ್ಯವಸ್ಥೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ಸಮೃದ್ಧಿ ವಿ. ಮಂಜುನಾಥ್ ಮಾತನಾಡಿ, ಹಲವು ವರ್ಷಗಳಿಂದ ಮುಳಬಾಗಿಲಿನಲ್ಲಿ ಕೆಂಪೇಗೌಡ ಜಯಂತಿ ಆಚರಣೆ ನಡೆದಿರಲಿಲ್ಲ, ತಾನು ಶಾಸಕರಾದ ಬಳಿಕ ಪ್ರತಿವರ್ಷ ಜಯಂತಿ ಆಚರಿಸುವಂತೆ ಒಕ್ಕಲಿಗ ಸಮುದಾಯದ ಮುಖಂಡರಿಗೆ ಒತ್ತಾಯಿಸುತ್ತಿದ್ದೆ, ಇದೀಗ ಅದ್ದೂರಿಯಾಗಿ ಕಾರ್ಯಕ್ರಮ ನಡೆಯುತ್ತಿದ್ದು, ಇಡೀ ಮುಳಬಾಗಿಲಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿರುವುದು ತಮ್ಮ ಜೀವನದ ಹೆಮ್ಮೆಯ ಸಂಗತಿ ಎಂದರು.
ರಾಜ್ಯಸಭೆ ಮಾಜಿ ಸದಸ್ಯ ಎಂ.ವಿ. ರಾಜೀವ್ ಗೌಡ ಮಾತನಾಡಿ, ಮುಳಬಾಗಿಲು ತಾಲೂಕಿನ ಒಕ್ಕಲಿಗ ಸಮುದಾಯದ ಹಲವು ಮುಖಂಡರು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ಹಾಗೂ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ, ದಿವಂಗತರಾಗಿರುವ ಅಂತಹ ಮಹನೀಯರ ಸೇವೆಯನ್ನು ಸ್ಮರಿಸುವ ಮೂಲಕ ಅವರ ಕೊಡುಗೆಯನ್ನು ಯುವ ಪೀಳಿಗೆಗೆ ಪರಿಚಯಿಸಬೇಕು, ಇಂದಿಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವವರ ಬಗ್ಗೆ ಯುವಜನತೆಗೆ ಕನಿಷ್ಠ ಪ್ರಾಥಮಿಕ ಮಾಹಿತಿಯಾದರೂ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಸಂಸದ ಎಂ. ಮಲ್ಲೇಶ್ ಬಾಬು, ಶಾಸಕರಾದ ಕೊತ್ತೂರು ಜಿ. ಮಂಜುನಾಥ್, ಕೆ.ವೈ. ನಂಜೇಗೌಡ, ಎಂ.ಎಲ್. ಅನಿಲ್ ಕುಮಾರ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ. ಶಂಕಪ್ಪ ಸೇರಿದಂತೆ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಒಕ್ಕಲಿಗರ ಸಂಘಗಳ ಪದಾಧಿಕಾರಿಗಳು ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್