ಮುಳಬಾಗಿಲಿನಲ್ಲಿ ಆಕರ್ಷಕ ನಾಡಪ್ರಭು ಕೆಂಪೇಗೌಡ ಜಯಂತಿಯ ಮೆರವಣಿಗೆ
ಮುಳಬಾಗಿಲಿನಲ್ಲಿ ಆಕರ್ಷಕ ನಾಡಪ್ರಭು ಕೆಂಪೇಗೌಡ ಜಯಂತಿಯ ಮೆರವಣಿಗೆ
ಮುಳಬಾಗಿಲು ನಗರದಲ್ಲಿ ಮಂಗಳವಾರ ನಾಡಪ್ರಭು ಕೆಂಪೇಗೌಡರ ಜಯಂತಿಯ ಅಂಗವಾಗಿ ಆಕರ್ಷಕ ಮೆರವಣಿಗೆ ನಡೆಯಿತು.


ಕೋಲಾರ, 06 ಅಕ್ಟೋಬರ್ (ಹಿ.ಸ) : ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದ ಅಂಗವಾಗಿ ಮುಳಬಾಗಿಲು ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಗರದಲ್ಲಿ ಮಂಗಳವಾರ ಅದ್ದೂರಿ ಕಾರ್ಯಕ್ರಮ ನಡೆಯಿತು. ಸುಮಾರು ೨೭೦ಕ್ಕೂ ಅಧಿಕ ಕೆಂಪೇಗೌಡರ ಪಲ್ಲಕ್ಕಿಗಳೊಂದಿಗೆ ನಡೆದ ಭವ್ಯ ಮೆರವಣಿಗೆಗೆ ಸಾವಿರಾರು ಮಂದಿ ಸಾಕ್ಷಿಯಾದರು.

ನಗರದ ಹೊರವಲಯದ ಕರ್ನಾಟಕ ಗೃಹ ಮಂಡಳಿ ಬಡಾವಣೆ ಮುಂಭಾಗದಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವದೂತ ಮಹಾಸ್ವಾಮೀಜಿ, ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನAದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಆನಂತರ ಸೋಮೇಶ್ವರಪಾಳ್ಯ ವೃತ್ತದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಒಕ್ಕಲಿಗ ಸಮುದಾಯದವರು ಸಾಂಪ್ರದಾಯಿಕ ಉಡುಪು, ಕಲಾತಂಡಗಳು, ನೃತ್ಯ ಹಾಗೂ ವಾದ್ಯಮೇಳಗಳೊಂದಿಗೆ ಮೆರವಣಿಗೆಗೆ ಮೆರುಗು ತಂದರು, ಮಹಿಳೆಯರು ಪೂರ್ಣಕುಂಭ ಸ್ವಾಗತದ ಮೂಲಕ ಮೆರವಣಿಗೆಯನ್ನು ಬರಮಾಡಿಕೊಂಡರು.

ಬೆಳಗ್ಗೆ ೧೧ ಗಂಟೆಗೆ ಆರಂಭವಾದ ಮೆರವಣಿಗೆ ಸಂಜೆ ೫.೩೦ರವರೆಗೂ ಸಾಗಿದ್ದರಿಂದ ನಗರದ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಜನದಟ್ಟಣೆ ಕಂಡುಬAದಿತು, ಹಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದ್ದು, ನಗರದಲ್ಲಿ ಸಾರಿಗೆ ಸಂಪರ್ಕದ ಮೇಲೂ ಪರಿಣಾಮ ಬೀರಿತು. ಪ್ರಯಾಣಿಕರಿಗೆ ತೊಂದರೆಯಾಗದAತೆ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಗರದ ಹೊರವಲಯದ ಪರ್ಯಾಯ ಮಾರ್ಗಗಳಲ್ಲಿ ಬಸ್ ವ್ಯವಸ್ಥೆ ಕಲ್ಪಿಸಿದ್ದರು.

ಐತಿಹಾಸಿಕ ಮಹತ್ವ ಪಡೆದ ಕೆಂಪೇಗೌಡ ಜಯಂತ್ಯುತ್ಸವದಲ್ಲಿ ಧಾರ್ಮಿಕ ಕ್ಷೇತ್ರದ ಗಣ್ಯರು, ಕೇಂದ್ರ ಹಾಗೂ ರಾಜ್ಯ ಸಚಿವರು, ಶಾಸಕರು, ಸಂಸದರು ಸೇರಿದಂತೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಹಲವು ಪ್ರಮುಖರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು. ನಾಡಪ್ರಭು ಕೆಂಪೇಗೌಡರ ಸ್ಮರಣೆ, ಒಕ್ಕಲಿಗ ಸಮುದಾಯದ ಸಾಂಸ್ಕೃತಿಕ ಪರಂಪರೆ ಹಾಗೂ ಸಂಘಟನಾ ಶಕ್ತಿಯ ಪ್ರದರ್ಶನಕ್ಕೆ ಕಾರ್ಯಕ್ರಮ ವೇದಿಕೆಯಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande