ಮಾಜಿ ಸಚಿವ ಶಿವಾನಂದ ಕೌಜಲಗಿ ನಿಧನ
ಬೆಳಗಾವಿ, 30 ಅಕ್ಟೋಬರ್ (ಹಿ.ಸ.): ಉತ್ತರ ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಸಚಿವ ಹಾಗೂ ಮಾಜಿ ಸಂಸದ ಶಿವಾನಂದ ಕೌಜಲಗಿ (87) ಅವರು ವಯೋಸಹಜ ಅನಾರೋಗ್ಯದಿಂದ ಬೈಲಹೊಂಗಲದ ತಮ್ಮ ನಿವಾಸದಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಅವರ ನಿಧನದ ವಿಷಯವನ್ನು ಪುತ್ರ ಹಾಗೂ ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಹಾಲಿ ಶ
ಸಾಮಾಜಿಕ ಮಾಧ್ಯಮದಲ್ಲಿ ಕುಟುಂಬಸ್ಥರು ಹಂಚಿಕೊಂಡಿರುವ ಚಿತ್ರ


ಬೆಳಗಾವಿ, 30 ಅಕ್ಟೋಬರ್ (ಹಿ.ಸ.):

ಉತ್ತರ ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಸಚಿವ ಹಾಗೂ ಮಾಜಿ ಸಂಸದ ಶಿವಾನಂದ ಕೌಜಲಗಿ (87) ಅವರು ವಯೋಸಹಜ ಅನಾರೋಗ್ಯದಿಂದ ಬೈಲಹೊಂಗಲದ ತಮ್ಮ ನಿವಾಸದಲ್ಲಿ ಶುಕ್ರವಾರ ನಿಧನರಾಗಿದ್ದಾರೆ.

ಅವರ ನಿಧನದ ವಿಷಯವನ್ನು ಪುತ್ರ ಹಾಗೂ ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಮಹಾಂತೇಶ ಕೌಜಲಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಶಿವಾನಂದ ಕೌಜಲಗಿ ಅವರು ಉತ್ತರ ಕರ್ನಾಟಕದ ಹಿರಿಯ ಮತ್ತು ಪ್ರಭಾವಿ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದರು. ಬೈಲಹೊಂಗಲ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದರು. ರಾಜ್ಯ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

1996ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಅವರು, ಸಂಸತ್ತಿನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. ನಾಡಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ, ಶೈಕ್ಷಣಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದರು.

ಮೃತರ ಅಂತ್ಯಕ್ರಿಯೆ ಅ.31ರಂದು ಬೆಳಿಗ್ಗೆ 11 ಗಂಟೆಗೆ ಬೈಲಹೊಂಗಲ ಪಟ್ಟಣದ ಅನಿಗೋಳ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಸಕಲ ವಿಧಿವಿಧಾನಗಳೊಂದಿಗೆ ನೆರವೇರಲಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande