
ಬೆಂಗಳೂರು, 29 ಅಕ್ಟೋಬರ್ (ಹಿ.ಸ.):
ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಅವರ ಪುಣ್ಯಸ್ಮರಣೆಯ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಕ್ಸ್ನಲ್ಲಿ, “ಬಲಗೈಯಲ್ಲಿ ಮಾಡಿದ ದಾನ ಎಡಗೈಗೂ ತಿಳಿಯದಂತೆ ಸಮಾಜ ಸೇವೆ ಮಾಡಿದ ಅಪ್ಪಟ ಹೃದಯವಂತರು ಪುನೀತ್ ರಾಜ್ಕುಮಾರ್. ನಟನೆಯ ಜೊತೆಗೆ ತಮ್ಮ ಸರಳತೆ ಹಾಗೂ ಮಾನವೀಯತೆಯಿಂದ ಕೋಟ್ಯಂತರ ಮನಸ್ಸುಗಳನ್ನು ಗೆದ್ದವರು. ನಮ್ಮನ್ನು ಅಗಲಿ ಐದು ವರ್ಷ ಕಳೆದರೂ ಅವರ ನೆನಪುಗಳು ನಮ್ಮ ಹೃದಯದ ಬಡಿತದಲ್ಲಿ ಎಂದೆಂದಿಗೂ ಶಾಶ್ವತವಾಗಿರುತ್ತವೆ” ಎಂದು ಸ್ಮರಿಸಿದ್ದಾರೆ.
ವಿಜಯೇಂದ್ರ ಅವರು, “ಕರುನಾಡು ಎಂದೂ ಮರೆಯಲಾಗದ ಕರ್ನಾಟಕ ರತ್ನ, ಕನ್ನಡಿಗರ ಪ್ರೀತಿಯ ಅಪ್ಪು ಪುನೀತ್ ರಾಜ್ಕುಮಾರ್ ಅವರ ಪುಣ್ಯತಿಥಿಯಂದು ಆ ಕಲಾಚೇತನಕ್ಕೆ ಭಾವಪೂರ್ಣ ನಮನಗಳು. ಅದ್ಭುತ, ಯಶಸ್ವಿ ಹಾಗೂ ಜನಪ್ರಿಯ ನಟನಾಗಿ ಮಾತ್ರವಲ್ಲದೆ, ತಮ್ಮ ಹೃದಯವಂತಿಕೆಯಿಂದ ಕೋಟ್ಯಂತರ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಸರಳತೆ ಮತ್ತು ನಿಸ್ವಾರ್ಥ ಸಮಾಜ ಸೇವೆಯ ಮೂಲಕ ಅಪ್ಪು ಎಂದೆಂದಿಗೂ ಅಮರರಾಗಿದ್ದಾರೆ” ಎಂದು ಹೇಳಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಅವರು, “ನಮ್ಮನ್ನಗಲಿ ವರ್ಷಗಳೇ ಉರುಳಿದರೂ ಕೋಟ್ಯಂತರ ಹೃದಯಗಳಲ್ಲಿ ಎಂದಿಗೂ ಮಾಸದ ಪ್ರೀತಿಯಾಗಿ ಪುನೀತ್ ರಾಜ್ಕುಮಾರ್ ಉಳಿದಿದ್ದಾರೆ. ಅವರ ವ್ಯಕ್ತಿತ್ವ, ಸರಳ ಸಜ್ಜನಿಕೆ ಮತ್ತು ಸಮಾಜಮುಖಿ ಸೇವೆ ಅಪ್ಪು ಅವರನ್ನು ಅಜರಾಮರಗೊಳಿಸಿವೆ. ಕನ್ನಡನಾಡಿನ ರಾಜರತ್ನವಾಗಿರುವ ಅವರ ಪುಣ್ಯಸ್ಮರಣೆಯ ಈ ದಿನದಂದು ಭಾವಪೂರ್ಣ ನಮನಗಳನ್ನು ಸಮರ್ಪಿಸುತ್ತೇನೆ” ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.