ಮೆಟ್ರೋ ನೀಲಿ ಮಾರ್ಗಕ್ಕೆ ಸುಪ್ರೀಂಕೋರ್ಟ್ ಹಸಿರು ನಿಶಾನೆ; ಹೆಬ್ಬಾಳ ಕಾಮಗಾರಿಗೆ ಇದ್ದ ಅಡ್ಡಿ ನಿವಾರಣೆ
ನೀಲಿ ಮಾರ್ಗದ ಮೆಟ್ರೋ ಕಾಮಗಾರಿಗೆ ಸುಪ್ರೀಂ ಕೋರ್ಟ್ನಿಂದ ಹಸಿರು ನಿಶಾನೆ ದೊರೆತಿದ್ದು, ಹೆಬ್ಬಾಳದಲ್ಲಿ ಕಾಮಗಾರಿ ಕೈಗೊಳ್ಳಲು ಎದುರಾಗಿದ್ದ ಕಾನೂನು ಅಡ್ಡಿ ನಿವಾರಣೆಯಾಗಿದೆ.
supreme-court-green-signal-blue-line-hebbal-project


ಬೆಂಗಳೂರು, 27 ಅಕ್ಟೋಬರ್ (ಹಿ.ಸ.):

ಬೆಂಗಳೂರು ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿಗೆ ಮತ್ತಷ್ಟು ವೇಗ ಸಿಗಲಿದೆ. ಭೂಮಿ ವಿಚಾದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ್ದ ಸುಪ್ರೀಂ ಕೋರ್ಟ್ ಇದೀಗ ತನ್ನ ಆದೇಶ ಕಾಮಗಾರಿಗೆ ಅಡ್ಡಿ ಆಗುವುದಿಲ್ಲ ಎಂದಿದ್ದು. ಇದರಿಂದ ಹೆಬ್ಬಾಳ ವ್ಯಾಪ್ತಿಯಲ್ಲಿನ ಕಾಮಗಾರಿ ಮುಂದುವರಿಯಲಿದೆ.

ಹೆಬ್ಬಾಳ ವ್ಯಾಪ್ತಿಯಲ್ಲಿ ಮೆಟ್ರೋ ಕಾಮಗಾರಿ ವೇಳೆ ಉಂಟಾಗಿದ್ದ ಭೂಮಿ ಸ್ವಾಧೀನ ವಿಚಾರದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಹೇಳಿದ್ದ ಸುಪ್ರೀಂ ಕೋರ್ಟ್ ಈ ಹಿಂದೆ ಆದೇಶಿಸಿತ್ತು. ಇದೀಗ ತನ್ನ ಆದೇಶ ಕಾಮಗಾರಿಗೆ ಅಡ್ಡಿ ಆಗುವುದಿಲ್ಲ ಎನ್ನುವ ಮೂಲಕ ಕಾಮಗಾರಿ ಮುಂದುವರಿಸಬಹುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಅನುಮತಿ ನೀಡಿದೆ.

ನೀಲೀ ಮಾರ್ಗದ ಕಾಮಗಾರಿಗೆ ವೇಗ

ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚಿದೇವ್ ಅವರಿದ್ದ ವಿಭಾಗೀಯ ಪೀಠವು BMRCL ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿತು. ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮೆಟ್ರೋ ಪರವಾಗಿ ವಾದಿಸಿದರು. ವಿಚಾರಣೆ ಆಲಿಸಿದ ನ್ಯಾಯಪೀಠ ಕಾಮಗಾರಿಗೆ ಗ್ರೀನ್ ಸಿಗ್ನಲ್ ನೀಡಿತು. ಇದರಿಂದ ಕೆ.ಆರ್.ಪುರಂ-ಏರ್ ಪೋರ್ಟ್ ನಡುವಿನ ಹೆಬ್ಬಾಳದಲ್ಲಿ ಇಂಟರ್ ಚೇಂಜ್ ನಿಲ್ದಾಣ ಸೇರಿದಂತೆ ವಿವಿಧ ಕಾಮಗಾರಿಗಳು ಮತ್ತಷ್ಟು ತ್ವರಿತಗತಿಯಲ್ಲಿ ನಡೆಯಲಿವೆ.

ಹೆಬ್ಬಾಳದ ಭೂಮಿಯನ್ನು ಖಾಸಗಿ ಯೋಜನೆಗಾಗಿ ಪಡೆದಿದ್ದ 'ಲೇಕ್ವ್ಯೂ ಟೂರಿಸಂ ಕಾಪೋರೇಷನ್ 2026ರ ಮೇ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿತ್ತು. ಅಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಹೆಬ್ಬಾಳದ ಈ ಜಾಗದ ವಿಚಾರದಲ್ಲಿ ತಟಸ್ಥವಾಗಿರುವಂತೆ ಸೂಚಿಸಿತ್ತು.

ಹೆಬ್ಬಾದಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಸಂಬಂಧಿಸಿದಂತೆ 55.13 ಎಕ್ರೆ ಜಾಗ ಪೈಕಿ 1.27 ಎಕ್ರೆ ಖರಾಬು ಭೂಮಿಯನ್ನು ನಮ್ಮ ಮೆಟ್ರೋಗಾಗಿ ಹಸ್ತಾಂತರ ಮಾಡಲಾಗಿತ್ತು. ಅದಕ್ಕಾಗಿ ಸುಮಾರು 20 ಕೋಟಿ ರೂಪಾಯಿ ಹಣವನ್ನು ಮಂಡಳಿಯಲ್ಲಿ ಠೇವಣಿ ಇಡಲಾಗಿದೆ.

ನೀಡಿದ್ದ ಭೂಮಿ ರದ್ದು, ಪ್ರಶ್ನಿಸಿ ಅರ್ಜಿ ಸಲ್ಲಿಕೆ

ನಮ್ಮ ಮೆಟ್ರೋ ಇಂಟರ್ ಚೇಂಜ್ಗಾಗಿ ಭೂಮಿ ಪಡೆದು ಕಾಮಗಾರಿ ನಡೆಸುತ್ತಿತ್ತು. ಆಗ ಹಸ್ತಾಂತರವಾದ ಭೂಮಿಯನ್ನು ರದ್ದುಗೊಳಿಸಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿರುವ ನಮ್ಮ ಮೆಟ್ರೋ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗೆ ಮೆಟ್ರೋ ಕಾಮಗಾರಿ ವಿಳಂಬವಾದರೆ ಹಣಕಾಸಿನ ಹೊರೆ ಆಗುತ್ತದೆ. ಅಲ್ಲದೇ ಹೆಬ್ಬಾಳದ ಉದ್ದೇಶಿತ ಜಾಗದಲ್ಲಿ ಸಂಚಾರ ದಟ್ಟಣೆ ಸಹ ವಿಪರೀತವಾಗಲಿದೆ ಎಂದು ಮೆಟ್ರೋ ಪರ ವಕೀಲರು ತಿಳಿಸಿದರು. ವಾದ ವಿವಾದ ಆಲಿಸಿ ಕಾಮಗಾರಿ ಮುಂದುವರಿಕೆಗೆ ನ್ಯಾಯಪೀಠ ಅಸ್ತು ಎಂದಿದೆ.

ಹೆಬ್ಬಾಳದಿಂದ ಕೆಐಎ 72% ಕಾಮಗಾರಿ ಪೂರ್ಣ

ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆ.ಆರ್.ಪುರಂವರೆಗಿನ ನೀಲಿ ಮಾರ್ಗದ ಬಹುತೇಕ ಕಾಮಗಾರಿ ಮುಗಿದೆ. ಶೀಘ್ರವೇ ಈ ಮಾರ್ಗದಲ್ಲಿ ಪ್ರಾಯೋಗಿಕ ರೈಲು ಸಂಚಾರ ಆಗಬೇಕಿದೆ. ಇನ್ನೂ ಕೆ.ಆರ್.ಪುರಂನಿಂದ ಹೆಬ್ಬಾಳ ಮಾರ್ಗವಾಗಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ ನೀಲಿ ಮಾರ್ಗವು ಎರಡನೇ ಹಂತದಲ್ಲಿ ನಿರ್ಮಾಣವಾಗುತ್ತಿದೆ.

ಈ ಪೈಕಿ ಹೆಬ್ಬಾಳ ಭಾಗದಲ್ಲಿ ನಿರಂತರ ವಾಹನ ಸಂಚಾರ, ಭೂಮಿಸ್ವಾಧೀನ, ಕೋರ್ಟ್ ವ್ಯಾಜ್ಯದಿಂದ ಕಾಮಗಾರಿ ವಿಳಂಬವಾಗುತ್ತಿತ್ತು. ಹೆಬ್ಬಾಳ-ಏರ್ ಪೋರ್ಟ್ವರೆಗಿನ ಮಾರ್ಗವು ಸುಮಾರು 72ರಷ್ಟು ಪೂರ್ಣಗೊಂಡಿದೆ. 2027ರಲ್ಲಿ ಸಂಪೂರ್ಣ ಕಾಮಗಾರಿ ಮುಗಿಸುವ ಗಡುವಿನೊಂದಿಗೆ ಕಾಮಗಾರಿಗೆ ವೇಗ ನೀಡಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande