
ಕೋಲಾರ, 25 ಅಕ್ಟೋಬರ್ (ಹಿ.ಸ.)
ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಬೆಳೆಸಲು ನಾವು ಅಹಿಂಸೆಯ ಮಾರ್ಗವನ್ನು ಅನುಸರಿಸಬೇಕು. ಭಿನ್ನಾಭಿಪ್ರಾಯಗಳಿದ್ದರೂ ಹಿಂಸೆಗೆ ಅವಕಾಶ ನೀಡದೆ, ಪರಸ್ಪರ ಗೌರವ ಮತ್ತು ತಿಳುವಳಿಕೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ದೀನಬಂಧು ಸಂಸ್ಥೆಯ ಸಂಸ್ಥಾಪಕರಾದ ಪ್ರೊ.ಜಿ. ಎಸ್.ಜಯದೇವ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ಸೇವಾ ಸಮಿತಿ ಹಾಗೂ ಮೈಸೂರಿನ ಬೋಧಿವೃಕ್ಷ ಅಭಿವೃದ್ಧಿ ಸೊಸೈಟಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನವಯುವ ಭಾರತ ಎಂಬ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರೀತಿ ಮತ್ತು ಕಾಳಜಿಯಿಂದ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯ. ನಿರಂತರ ಪ್ರೀತಿ, ಆರೈಕೆ ಮತ್ತು ಸಹಾನುಭೂತಿಯ ಮೂಲಕ ಅವರಲ್ಲಿ ಹೊಸ ಭರವಸೆಯನ್ನು ಮೂಡಿಸಬಹುದು. ಇದೊಂದು ಪ್ರೀತಿಯ ಪವಾಡವೇ ಸರಿ. ಕೆಲವೊಮ್ಮೆ ನಾವು ಮಾಡುವ ಪುಟ್ಟದಾದ ಒಂದು ಒಳ್ಳೆಯ ಕಾರ್ಯವೇ ಮತ್ತೊಬ್ಬರ ಬದುಕನ್ನು ಬದಲಾಯಿಸುತ್ತದೆ. ನಮ್ಮೊಳಗಿನ ಮಾನವೀಯತೆಯೇ ಸಮಾಜದಲ್ಲಿ ನಿಜವಾದ ಬದಲಾವಣೆಯನ್ನು ತರಬಲ್ಲದು. ನಮ್ಮಲ್ಲಿ ಸಹಿಷ್ಣುತೆ ಮತ್ತು ಸ್ವೀಕಾರ ಎರಡೂ ಮುಖ್ಯ. ಸಹಿಷ್ಣುತೆ ಎಂದರೆ ಇತರರ ಭಿನ್ನಾಭಿಪ್ರಾಯಗಳನ್ನು ಸಹಿಸಿಕೊಳ್ಳುವುದು; ಸ್ವೀಕಾರ ಎಂದರೆ ಅವರ ಮಾನವೀಯ ಘನತೆಯನ್ನು ಗೌರವಿಸಿ, ಅವರನ್ನು ಸಮಾಜದ ಭಾಗವಾಗಿ ಕಾಣುವುದು. ಈ ಎರಡೂ ಮೌಲ್ಯಗಳು ನಮ್ಮ ಸಾಮಾಜಿಕ ಜೀವನದಲ್ಲಿ ಅತ್ಯಗತ್ಯ ಎಂದರು.
ಸಮಾಜದಲ್ಲಿ ತಪ್ಪು ಮಾಹಿತಿ ಮತ್ತು ಆಧಾರರಹಿತ ಪ್ರಚಾರದಿಂದ ದೂರವಿದ್ದು, ಸತ್ಯ ಮತ್ತು ವಾಸ್ತವಾಂಶಗಳ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕು. ಜನರ ನಡುವೆ ವಿಶ್ವಾಸವನ್ನು ಬೆಳೆಸಬೇಕು. ಪ್ರಜಾಸತ್ತಾತ್ಮಕ ಮೌಲ್ಯಗಳು, ಸಮಾನತೆ ಮತ್ತು ಪರಸ್ಪರ ಗೌರವವನ್ನು ಉತ್ತೇಜಿಸಬೇಕು. ನಾವು ಮಾಡುವ ಪ್ರತಿಯೊಂದು ಸಾಮಾಜಿಕ ಕಾರ್ಯವೂ ಜನರ ಬದುಕಿನಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತರಬೇಕು. ನಮ್ಮ ಕೆಲಸದ ಫಲಿತಾಂಶವು ವ್ಯಕ್ತಿಗಳ ಜೀವನದಲ್ಲಿ, ಕುಟುಂಬಗಳ ಅಭಿವೃದ್ಧಿಯಲ್ಲಿ ಮತ್ತು ಸಮಾಜದ ಪ್ರಗತಿಯಲ್ಲಿ ಕಾಣಿಸಬೇಕು ಎಂದು ತಿಳಿಸಿದರು.
ನಾವು ಎಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ, ಎಷ್ಟು ಜನರಿಗೆ ಸಹಾಯ ಮಾಡಿದ್ದೇವೆ ಎಂಬುದಷ್ಟೇ ನಮ್ಮ ಸೇವೆಯ ಮೌಲ್ಯವನ್ನು ನಿರ್ಧರಿಸುವುದಿಲ್ಲ. ನಮ್ಮ ವ್ಯಕ್ತಿತ್ವ, ನಮ್ಮ ನಡವಳಿಕೆ, ನಮ್ಮ ಪ್ರೀತಿ ಮತ್ತು ಇತರರನ್ನು ಗೌರವಿಸುವ ಗುಣಗಳು ಸಮಾಜದಲ್ಲಿ ನಿಜವಾದ ಬದಲಾವಣೆಯನ್ನು ತರುತ್ತವೆ. ನಾವು ಇತರರೊಂದಿಗೆ ಹೇಗೆ ಮಾತನಾಡುತ್ತೇವೆ? ಅವರ ನೋವನ್ನು ಹೇಗೆ ಅರ್ಥಮಾಡಿಕೊಳ್ಳುತ್ತೇವೆ? ಸಂಕಷ್ಟದಲ್ಲಿರುವ ವ್ಯಕ್ತಿಯೊಂದಿಗೆ ಹೇಗೆ ನಡೆದುಕೊಳ್ಳುತ್ತೇವೆ? ಇವೆಲ್ಲವೂ ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತವೆ. ಕೇವಲ ಜೋರಾಗಿ ಮಾತನಾಡುವುದರಿಂದ ನಮ್ಮ ವಿಚಾರಗಳು ಇತರರಿಗೆ ತಲುಪುವುದಿಲ್ಲ. ನಮ್ಮ ನಡೆ, ನಮ್ಮ ವ್ಯಕ್ತಿತ್ವ ಮತ್ತು ನಮ್ಮ ಮಾನವೀಯ ಗುಣಗಳು ನಮ್ಮ ಮಾತುಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ ಎಂದರು.
ಬೌದ್ಧ ಧರ್ಮವು ಕರುಣೆ ಮತ್ತು ಅಹಿಂಸೆಯ ಮಹತ್ವವನ್ನು ಸಾರುವ ಅದ್ಭುತವಾದ ಧಾರ್ಮಿಕ ಮತ್ತು ತಾತ್ವಿಕ ಪರಂಪರೆಯಾಗಿದೆ. ಬುದ್ಧನ ಜೀವನದಲ್ಲಿ ಕರುಣೆ, ಪ್ರೀತಿ ಮತ್ತು ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮನೋಭಾವಕ್ಕೆ ವಿಶೇಷ ಸ್ಥಾನವಿದೆ. ಗಾಯಗೊಂಡು ಸಂಕಷ್ಟದಲ್ಲಿದ್ದ ವ್ಯಕ್ತಿಯೊಬ್ಬನಿಗೆ ಬುದ್ಧನು ಔಷಧಿ ಮತ್ತು ಬಿಸಿನೀರಿನ ಮೂಲಕ ನೆರವಾದ ಘಟನೆಯನ್ನು ಉದಾಹರಣೆಯಾಗಿ ನೆನಪಿಸಿಕೊಳ್ಳಬಹುದು. ಈ ಘಟನೆಯಿಂದ ನಾವು ಕಲಿಯಬೇಕಾದ ಪಾಠವೇನೆಂದರೆ, ಸಂಕಷ್ಟದಲ್ಲಿರುವ ವ್ಯಕ್ತಿಗೆ ಮೊದಲು ನೆರವಾಗಬೇಕು. ಆತನ ಜಾತಿ, ಧರ್ಮ, ಹಿನ್ನೆಲೆ ಅಥವಾ ಸ್ಥಾನಮಾನವನ್ನು ಪರಿಗಣಿಸುವುದಕ್ಕಿಂತ ಆತನ ನೋವನ್ನು ಅರ್ಥಮಾಡಿಕೊಳ್ಳುವುದು. ನಿಜವಾದ ಧರ್ಮವೆಂದರೆ ಕೇವಲ ಆಚರಣೆಗಳಲ್ಲ; ನೋವಿನಲ್ಲಿರುವ ವ್ಯಕ್ತಿಯ ಕಣ್ಣೀರನ್ನು ಒರೆಸುವುದು, ಹಸಿದವರಿಗೆ ಆಹಾರ ನೀಡುವುದು ಮತ್ತು ಅಸಹಾಯಕರಿಗೆ ಆಸರೆಯಾಗುವುದಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಸಾಮಾಜಿಕ ಸೇವೆ ಮಾಡುವಾಗ ನಾವು ಜನರಿಗೆ ನಿರಂತರವಾಗಿ ನೆರವು ನೀಡುವುದರಲ್ಲೇ ನಿಲ್ಲಬಾರದು. ಅವರು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು, ಉದ್ಯೋಗ ಪಡೆದು, ಆರ್ಥಿಕವಾಗಿ ಸ್ವತಂತ್ರರಾಗಿ ಬದುಕುವಂತೆ ಮಾಡಬೇಕು. ಇದು ಸಾಮಾಜಿಕ ಸೇವೆಯ ಉತ್ತಮ ಮಾದರಿ. ಒಬ್ಬ ವ್ಯಕ್ತಿಗೆ ಸಹಾಯ ಮಾಡುವುದರಿಂದ ಆತನ ಬದುಕು ಬದಲಾಗಬಹುದು. ಆದರೆ ಆ ವ್ಯಕ್ತಿಯ ಸಾಮರ್ಥ್ಯವನ್ನು ಬೆಳೆಸಿ, ಇತರರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಕೊಂಡೊಯ್ದರೆ, ಆ ಬದಲಾವಣೆಯ ಪರಿಣಾಮ ಇನ್ನೂ ವ್ಯಾಪಕವಾಗುತ್ತದೆ. ಆದ್ದರಿಂದ ಸಾಮಾಜಿಕ ಸೇವೆಯು ಮಾನವೀಯ ಕಾಳಜಿಯ ಜೊತೆಗೆ ತಾಂತ್ರಿಕ ಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಸ್ವಾವಲಂಬನೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳು ನಮ್ಮ ಸಮಾಜದ ಪ್ರಮುಖ ಸವಾಲುಗಳಾಗಿವೆ. ಪುರುಷಪ್ರಧಾನ ಮನೋಭಾವ, ಲಿಂಗಾಧಾರಿತ ತಾರತಮ್ಯ ಮತ್ತು ಹೆಣ್ಣುಮಕ್ಕಳ ಬಗ್ಗೆ ಇರುವ ತಪ್ಪು ಕಲ್ಪನೆಗಳು ಸಮಾಜದ ಅಭಿವೃದ್ಧಿಗೆ ಅಡ್ಡಿಯಾಗುತ್ತವೆ. ಹೆಣ್ಣುಮಕ್ಕಳ ಜನನ ಮತ್ತು ಬದುಕುವ ಹಕ್ಕನ್ನು ಗೌರವಿಸಬೇಕು. ಹೆಣ್ಣುಮಕ್ಕಳ ವಿರುದ್ಧದ ತಾರತಮ್ಯ, ಹಿಂಸೆ ಮತ್ತು ಹತ್ಯೆಯಂತಹ ಅಮಾನವೀಯ ಕೃತ್ಯಗಳನ್ನು ತಡೆಯಲು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಲಿಂಗಾನುಪಾತದಲ್ಲಿನ ಅಸಮತೋಲನವು ಗಂಭೀರ ಸಾಮಾಜಿಕ ಸಮಸ್ಯೆಯಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ಆಹಾರ, ಆರೋಗ್ಯ, ಶಿಕ್ಷಣ, ಸುರಕ್ಷತೆ ಮತ್ತು ಗೌರವಯುತ ಜೀವನ ದೊರೆಯಬೇಕು. ಜನರ ನಿಜವಾದ ಅಗತ್ಯಗಳನ್ನು ಗುರುತಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಸಾಮಾಜಿಕ ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದರು.
ವಿಶ್ವವಿದ್ಯಾಲಯದ ಸಾಮಾಜಿಕ ಸೇವಾ ವಿಸ್ತರಣಾ ಕೇಂದ್ರದ ನಿರ್ದೇಶಕರಾದ ಫಾದರ್ ಅನೂಪ್ ಕುರಿಯನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಯುವಸಮುದಾಯಕ್ಕೆ ಸೂಕ್ತವಾದ ಮಾರ್ಗದರ್ಶನ ನೀಡಬೇಕಿದೆ ಎಂದು ಶುಭಾಶಯ ಕೋರಿದರು. ಕ್ರಿಸ್ತು ಜಯಂತಿ ವಿವಿಯ ಸಾಮಾಜಿಕ ಸೇವಾ ಸಮಿತಿಯ ಪ್ರಧಾನ ಸಂಯೋಜಕರಾದ ಡಾ. ಕುಪ್ಪನಹಳ್ಳಿ ಎಂ. ಭೈರಪ್ಪ, ರೇಚಲ್ ಮರಿಯಾ, ಕಾರ್ಯಕ್ರಮದ ಸಂಚಾಲಕರಾದ ಡಾ. ದೀಕ್ಷಿತ್ ಕುಮಾರ್, ಡಾ. ಕಾಳೇಶ್ವರಿ ಸಿ., ಡಾ.ಕಿರಣಕುಮಾರ್ ಕೆ., ಡಾ.ಕೃಷ್ಣ ಡಿ. ಲಮಾಣಿ, ವಿದ್ಯಾರ್ಥಿ ಸಂಚಾಲಕರಾದ ಚಿರಾಗ್ ದರ್ಶನ್ ಹಾಗೂ ಕಾವ್ಯಶ್ರೀ ಅವರು ಉಪಸ್ಥಿತರಿದ್ದರು. 300ಕ್ಕೂ ಹೆಚ್ಚು ವಿದ್ಯಾರ್ಥಿ ಸ್ವಯಂಸೇವಕರು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್