ಸಿದ್ದರಾಮಯ್ಯ ಘನತೆಗೆ ಧಕ್ಕೆ ತರಲು ಯತ್ನ - ಪಾರದರ್ಶಕ ತನಿಖೆ; ಪ್ರಿಯಾಂಕ್ ಖರ್ಗೆ
ಬೆಂಗಳೂರು, 24 ಅಕ್ಟೋಬರ್ (ಹಿ.ಸ.): ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪ್ರೇಶನ್ ಪ್ರಕರಣದ ಹಿಂದೆ ವ್ಯವಸ್ಥಿತ ಅಪರಾಧ ಸಂಚು ಅಡಗಿದ್ದು, ಸತ್ಯಾಸತ್ಯತೆ ಹೊರತರಲು ಪಾರದರ್ಶಕ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರ
priyank-kharge-sting-probe


ಬೆಂಗಳೂರು, 24 ಅಕ್ಟೋಬರ್ (ಹಿ.ಸ.):

ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪ್ರೇಶನ್ ಪ್ರಕರಣದ ಹಿಂದೆ ವ್ಯವಸ್ಥಿತ ಅಪರಾಧ ಸಂಚು ಅಡಗಿದ್ದು, ಸತ್ಯಾಸತ್ಯತೆ ಹೊರತರಲು ಪಾರದರ್ಶಕ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗೌರವಕ್ಕೆ ಧಕ್ಕೆ ತರುವ ಇಂತಹ ಷಡ್ಯಂತ್ರಗಳ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿರುವ ಅವರು, ತಪ್ಪಿತಸ್ಥರು ಎಷ್ಟೇ ಪ್ರಭಾವಿಯಾಗಿದ್ದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ವ್ಯವಸ್ಥಿತ ಷಡ್ಯಂತ್ರದ ಪಾರದರ್ಶಕ ತನಿಖೆ

ಸ್ಟಿಂಗ್ ಆಪರೇಷನ್ ಹಿಂದೆ ಯಾರಿದ್ದಾರೆ ಎಂಬುದನ್ನು ಬಯಲಿಗೆಳೆಯಬೇಕೆಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಗ್ರಹದ ಕುರಿತು ಮಾತನಾಡಿದ ಸಚಿವರು, ಈ ಇಡೀ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ ಇರುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ನಿಜಾಂಶ ಹೊರಬರಲೆಂದೇ ದೂರು ದಾಖಲಾಗಿದ್ದು, ನಮ್ಮ ಅಧಿಕಾರಿಗಳು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

ಇದು ತನಿಖಾ ಹಂತದಲ್ಲಿರುವುದರಿಂದ ಸಾರ್ವಜನಿಕರು ಅಥವಾ ಯಾರೂ ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಈ ವಿಡಿಯೋವನ್ನು ಯಾರು ಮಾಡಿದರು, ಇಷ್ಟು ವರ್ಷಗಳ ನಂತರ ಇದು ಯಾರ ಕೈಸೇರಿತು ಮತ್ತು ಇದ್ದಕ್ಕಿದ್ದಂತೆ ಹೇಗೆ ಅಪ್ಲೋಡ್ ಆಯಿತು ಎಂಬ ಎಲ್ಲ ಆಯಾಮಗಳನ್ನು ಅದರ ಮೂಲದಿಂದಲೇ ಪತ್ತೆಹಚ್ಚಿ ಸತ್ಯವನ್ನು ಜನರ ಮುಂದಿಡಲಾಗುವುದು ಎಂದು ವಿವರಿಸಿದರು.

ಸಿದ್ಧರಾಮಯ್ಯ ಗೌರವದ ಪ್ರಶ್ನೆ: ರಾಜಿ ಇಲ್ಲದ ವಿಚಾರಣೆ

ಇಂತಹ ಜಟಿಲ ಪ್ರಕರಣಗಳ ಸತ್ಯ ಒಂದೇ ದಿನದಲ್ಲಿ ಹೊರಬರಲು ಸಾಧ್ಯವಿಲ್ಲ, ಕೇವಲ ಪ್ರಚಾರಕ್ಕಾಗಿ ಗಡಿಬಿಡಿಯಲ್ಲಿ ತೀರ್ಮಾನಕ್ಕೆ ಬರುವುದು ಸರಿಯಲ್ಲ.

2015, 2023 ಹಾಗೂ 2025 ರ ಕಾಲಘಟ್ಟಗಳ ಉಲ್ಲೇಖವಿರುವುದರಿಂದ ಎಲ್ಲವನ್ನೂ ಆಳವಾಗಿ ಪರಿಶೀಲಿಸಬೇಕಾಗಿದೆ.

ಸರ್ಕಾರದ ಹಾಗೂ ಪಕ್ಷದ ಘನತೆಗಿಂತ ಮಿಗಿಲಾಗಿ ಇದು ಮಾಜಿ ಸಿಎಂ ಸಿದ್ದರಾಮಯ್ಯನವರ ವೈಯಕ್ತಿಕ ಘನತೆ ಮತ್ತು ಗೌರವದ ಪ್ರಶ್ನೆಯಾಗಿದೆ. ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಯಲಿದೆ.

ಈಗಾಗಲೇ ಪ್ರಕರಣದಲ್ಲಿ ಹೆಸರಿಸಲಾದವರ ಹೇಳಿಕೆಗಳನ್ನು ಮತ್ತು ವಿಚಾರಣೆಯ ವಿವರಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಸೂಕ್ತ ಸಮಯದಲ್ಲಿ ಚಾರ್ಜ್ಶೀಟ್ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.

ಹೆಚ್ ಡಿಕೆ ಆರೋಪಕ್ಕೆ ತಿರುಗೇಟು

ವಿಕ್ಕಿ ಎಂಬ ವ್ಯಕ್ತಿಯ ಹತ್ಯೆಯಾಗಿದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಚಿವರು, ಕುಮಾರಸ್ವಾಮಿಯವರು ಯಾವುದೋ ಹಳೆಯ ಪ್ರಕರಣವನ್ನು ಎಳೆದು ತಂದು ರಾಜಕೀಯ ಮಾಡುತ್ತಿದ್ದಾರೆ.

ಈ ಸಂಬಂಧ ಈವರೆಗೆ ಯಾವುದೇ ಅಧಿಕೃತ ದೂರು ಬಂದಿಲ್ಲ, ಕುಮಾರಸ್ವಾಮಿಯವರೇ ನೇರವಾಗಿ ದೂರು ನೀಡಿದರೆ ಆ ಬಗ್ಗೆಯೂ ತನಿಖೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ತಮ್ಮ ವೈಯಕ್ತಿಕ ದ್ವೇಷವನ್ನು ಸರ್ಕಾರದ ಮೂಲಕ ತೀರಿಸಿಕೊಳ್ಳಲು ಪ್ರಯತ್ನಿಸಬಾರದು ಎಂದ ಅವರು, ಸ್ಟಿಂಗ್ ಪ್ರಕರಣದಲ್ಲಿ ನೋಟಿಸ್ ಜಾರಿಯಾದ ಬಳಿಕ ನಾಪತ್ತೆಯಾಗಿರುವ ವ್ಯಕ್ತಿಗಳು ಯಾರ ರಕ್ಷಣೆಯಲ್ಲಿದ್ದಾರೆ ಎಂಬುದು ದೊಡ್ಡ ನಾಯಕರಿಗೆ ಚೆನ್ನಾಗಿ ತಿಳಿದಿದೆ, ಕುಮಾರಸ್ವಾಮಿಯವರ ಆಪ್ತರೇ ಆಗಿರುವ ಆ ತಲೆಮರೆಸಿಕೊಂಡವರನ್ನು ವಿಚಾರಣೆಗೆ ಕಳುಹಿಸಿಕೊಟ್ಟರೆ ಸತ್ಯ ಬೇಗ ಹೊರಬರಲಿದೆ ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande