
ಬೆಂಗಳೂರು, 24 ಅಕ್ಟೋಬರ್ (ಹಿ.ಸ.):
ದಕ್ಷಿಣ ಭಾರತದ ಏಕೈಕ ಐಷಾರಾಮಿ ಪ್ರವಾಸಿ ರೈಲಾದ ಗೋಲ್ಡನ್ ಚಾರಿಯಟ್ ಅತ್ಯಾಧುನಿಕ ಸೌಲಭ್ಯಗಳು ಹಾಗೂ ಹೊಸ ರಾಜವೈಭವದೊಂದಿಗೆ ತನ್ನ ಹೊಸ ಋತುವಿನ ಯಾನವನ್ನು ಅದ್ಧೂರಿಯಾಗಿ ಮರು ಆರಂಭಿಸಿದೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ.
ಶಿವಕುಮಾರ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಜಂಟಿಯಾಗಿ ಹಸಿರು ನಿಶಾನೆ ತೋರುವ ಮೂಲಕ ರೈಲಿನ ಸಂಚಾರಕ್ಕೆ ಚಾಲನೆ ನೀಡಿದರು.
ಐಆರ್ಸಿಟಿಸಿ ಹಾಗೂ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಜಂಟಿಯಾಗಿ ನಿರ್ವಹಿಸುತ್ತಿರುವ ಈ ಐಷಾರಾಮಿ ರೈಲಿಗೆ ಪ್ರವಾಸಿಗರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.
ನವೀಕೃತ ರೂಪದಲ್ಲಿ ಕಣಕ್ಕಿಳಿದಿರುವ ಈ ರೈಲಿನ ಮೊದಲ ಪ್ರಯಾಣದ ಎಲ್ಲಾ ಟಿಕೆಟ್ಗಳು ಈಗಾಗಲೇ ಸಂಪೂರ್ಣವಾಗಿ ಮಾರಾಟವಾಗಿದ್ದು, ದೇಶಿಯ ಪ್ರವಾಸಿಗರಷ್ಟೇ ಅಲ್ಲದೆ ಸ್ಪೇನ್ ಸೇರಿದಂತೆ ವಿವಿಧ ವಿದೇಶಿ ಅತಿಥಿಗಳು ಕೂಡ ಈ ಸುವರ್ಣ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಮೈಸೂರಿನ ರೈಲ್ವೆ ಕಾರ್ಯಾಗಾರದಲ್ಲಿ ಈ ರೈಲಿಗೆ ಸಂಪೂರ್ಣ ತಾಂತ್ರಿಕ ನವೀಕರಣ ಹಾಗೂ ಆಕರ್ಷಕ ವಿನ್ಯಾಸ ನೀಡಲಾಗಿದೆ. ಈ ಹಿಂದೆ ಕೇವಲ ಮಲಗುವ ಕೋಣೆಗಳನ್ನು ಮಾತ್ರ ಹೊಂದಿದ್ದ ಕ್ಯಾಬಿನ್ಗಳನ್ನು ಈಗ ಪ್ರತ್ಯೇಕ 'ಲಿವಿಂಗ್ ರೂಮ್' ಮತ್ತು 'ಬೆಡ್ ರೂಮ್' ಒಳಗೊಂಡಂತೆ ಮರುವಿನ್ಯಾಸಗೊಳಿಸಲಾಗಿದೆ.
ಹೊಯ್ಸಳ, ಚಾಲುಕ್ಯ ಹಾಗೂ ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ಥೀಮ್ ಆಧಾರಿಸಿ ಒಳಾಂಗಣವನ್ನು ಸುಂದರವಾಗಿ ಸಜ್ಜುಗೊಳಿಸಲಾಗಿದೆ. ಒಟ್ಟು 40 ಸುಸಜ್ಜಿತ ಕ್ಯಾಬಿನ್ಗಳಿದ್ದು, ಏಕಕಾಲಕ್ಕೆ 80 ಅತಿಥಿಗಳು ಇದರ ಪ್ರಯೋಜನ ಪಡೆಯಬಹುದು.
ವಿಕಲಚೇತನರಿಗಾಗಿ ವಿಶೇಷ ಕ್ಯಾಬಿನ್ ವ್ಯವಸ್ಥೆಯೂ ಇದೆ. ಪ್ರತಿಯೊಂದು ಕ್ಯಾಬಿನ್ನಲ್ಲಿ ಸ್ಮಾರ್ಟ್ ಟಿವಿ ಹಾಗೂ ಹೈ-ಸ್ಪೀಡ್ ವೈ-ಫೈ ಸೌಲಭ್ಯ ಕಲ್ಪಿಸಲಾಗಿದೆ.
ಪ್ರಯಾಣಿಕರ ರುಚಿಗೆ ತಕ್ಕಂತೆ ಜಾಗತಿಕ ಮತ್ತು ಭಾರತೀಯ ಖಾದ್ಯಗಳನ್ನು ಉಣಬಡಿಸಲು ಎರಡು ರೆಸ್ಟೋರೆಂಟ್ಗಳಿದ್ದು, ಪ್ರಥಮ ಬಾರಿಗೆ ಜೈನ್ ಹಾಗೂ ಗ್ಲುಟನ್-ಮುಕ್ತ ಆಹಾರದ ಆಯ್ಕೆಯನ್ನೂ ಪರಿಚಯಿಸಲಾಗಿದೆ. ಇದರೊಂದಿಗೆ ಮದಿರಾ ಲೌಂಜ್ ಬಾರ್, ಆರೋಗ್ಯ ಸ್ಪಾ, ಜಿಮ್, ಅತ್ಯಾಧುನಿಕ ಸಿಸಿಟಿವಿ ಕಣ್ಗಾವಲು ಹಾಗೂ ಅಗ್ನಿಶಾಮಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಈ ಬಾರಿಯ ಪ್ರವಾಸಿ ಋತುವಿನಲ್ಲಿ ಒಟ್ಟು 13 ಐಷಾರಾಮಿ ಪ್ರವಾಸಗಳನ್ನು ಯೋಜಿಸಲಾಗಿದೆ. 5 ರಾತ್ರಿಗಳು ಹಾಗೂ 6 ದಿನಗಳ 'ಪ್ರೈಡ್ ಆಫ್ ಕರ್ನಾಟಕ' ಪ್ರವಾಸದಲ್ಲಿ ಪ್ರವಾಸಿಗರು ಬಂಡೀಪುರ ವನ್ಯಜೀವಿ ಧಾಮ, ಬೇಲೂರು-ಹಳೇಬೀಡು, ಚಿಕ್ಕಮಗಳೂರಿನ ಕಾಫಿ ತೋಟಗಳು, ಹಂಪಿ ಹಾಗೂ ಗೋವಾ ಕಡಲತೀರಗಳಿಗೆ ಭೇಟಿ ನೀಡಲಿದ್ದಾರೆ. ಎಲ್ಲಾ ಪ್ರವಾಸಗಳು ಬೆಂಗಳೂರಿನಿಂದಲೇ ಆರಂಭವಾಗಿ ಇಲ್ಲಿಯೇ ಮುಕ್ತಾಯಗೊಳ್ಳಲಿವೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R