
ನವದೆಹಲಿ, 24 ಅಕ್ಟೋಬರ್ (ಹಿ.ಸ.):
ದೇಶದಲ್ಲಿ 11 ಕೋಟಿ ರೈತರಿಗೆ ವಿಶಿಷ್ಟ ಡಿಜಿಟಲ್ ಗುರುತಿನ ಚೀಟಿ ನೀಡುವ ಗುರಿಯನ್ನು ನಿಗದಿತ ಅವಧಿಗಿಂತ ಐದು ತಿಂಗಳು ಮೊದಲೇ ಸಾಧಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಅಭಿವೃದ್ಧಿ ಹೊಂದಿದ ಭಾರತ–ಸಮೃದ್ಧ ರೈತ’ ದೃಷ್ಟಿಕೋನದತ್ತ ಸಾಗುವ ದಿಸೆಯಲ್ಲಿ ಇದೊಂದು ಐತಿಹಾಸಿಕ ಸಾಧನೆಯಾಗಿದೆ ಎಂದು ಅವರು ಶನಿವಾರ ತಿಳಿಸಿದ್ದಾರೆ.
ದೇಶದ ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಅಕ್ಟೋಬರ್ 23ರ ರಾತ್ರಿಯ ವೇಳೆಗೆ 11 ಕೋಟಿ ರೈತರಿಗೆ ವಿಶಿಷ್ಟ ಡಿಜಿಟಲ್ ಗುರುತಿನ ಚೀಟಿ ನೀಡುವ ಕಾರ್ಯ ಪೂರ್ಣಗೊಂಡಿದೆ. ಈ ಗುರಿಯನ್ನು 2027ರ ಮಾರ್ಚ್ 31ರೊಳಗೆ ಸಾಧಿಸಲು ಉದ್ದೇಶಿಸಲಾಗಿತ್ತು. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯದ ಪ್ರಯತ್ನದಿಂದ ಐದು ತಿಂಗಳು ಮೊದಲೇ ಗುರಿ ತಲುಪಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಡಿ ಅನುಷ್ಠಾನಗೊಳ್ಳುತ್ತಿರುವ ‘ಡಿಜಿಟಲ್ ಕೃಷಿ ಅಭಿಯಾನ’ದ ಭಾಗವಾಗಿ ಈ ಸಾಧನೆ ಮಾಡಲಾಗಿದೆ. ರೈತರಿಗೆ ಸರ್ಕಾರಿ ಯೋಜನೆಗಳು, ಬ್ಯಾಂಕ್ ಸಾಲ, ಬೆಳೆ ವಿಮೆ ಹಾಗೂ ಪ್ರಕೃತಿ ವಿಕೋಪ ಪರಿಹಾರದ ಪ್ರಯೋಜನಗಳನ್ನು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ತಲುಪಿಸಲು ಈ ವ್ಯವಸ್ಥೆ ನೆರವಾಗಲಿದೆ. ಅಗತ್ಯ ದಾಖಲೆಗಳಿಗಾಗಿ ಪದೇಪದೆ ಸರ್ಕಾರಿ ಕಚೇರಿಗಳಿಗೆ ಅಲೆಯುವ ತೊಂದರೆಯೂ ತಪ್ಪಲಿದೆ ಎಂದು ಸಚಿವರು ಹೇಳಿದ್ದಾರೆ.
ಸರ್ಕಾರಿ ಸೌಲಭ್ಯ ಪಡೆಯುವುದು ಸುಲಭ
ರೈತರಿಗೆ ವಿಶಿಷ್ಟ ಡಿಜಿಟಲ್ ಗುರುತಿನ ಚೀಟಿ ದೊರೆಯುವುದರಿಂದ ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯುವ ಪ್ರಕ್ರಿಯೆ ಸರಳಗೊಳ್ಳಲಿದೆ. ಈ ಹಿಂದೆ ಪ್ರತಿ ಯೋಜನೆಗೂ ರೈತರು ದಾಖಲೆಗಳನ್ನು ಸಲ್ಲಿಸಿ, ಪರಿಶೀಲನೆ ಮಾಡಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕಾಗಿತ್ತು. ಡಿಜಿಟಲ್ ಗುರುತಿನ ವ್ಯವಸ್ಥೆಯಿಂದ ಈ ಪ್ರಕ್ರಿಯೆಗಳು ಹೆಚ್ಚು ಸರಳ, ಪಾರದರ್ಶಕ ಮತ್ತು ಪರಿಣಾಮಕಾರಿಯಾಗಲಿವೆ ಎಂದು ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಸಾಲ ಪಡೆಯುವ ಪ್ರಕ್ರಿಯೆ ಸುಲಭವಾಗಲಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ಹಾನಿಯ ಮೌಲ್ಯಮಾಪನ ಹಾಗೂ ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಲಿದೆ. ಪ್ರಕೃತಿ ವಿಕೋಪದ ಪರಿಹಾರ ಮೊತ್ತವನ್ನು ಅರ್ಹ ರೈತರಿಗೆ ತಲುಪಿಸುವುದಕ್ಕೂ ಅನುಕೂಲವಾಗಲಿದೆ.
ಕನಿಷ್ಠ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿ ಸಂದರ್ಭದಲ್ಲಿ ನೈಜ ರೈತರನ್ನು ಗುರುತಿಸಲು ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ಕಡಿಮೆ ಮಾಡಲು ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಆರು ಕೋಟಿಗೂ ಹೆಚ್ಚು ರೈತರಿಗೆ ಯೋಜನೆಗಳ ಪ್ರಯೋಜನ
ಕೇಂದ್ರ ಸರ್ಕಾರವು 2024ರ ಸೆಪ್ಟೆಂಬರ್ 2ರಂದು ಡಿಜಿಟಲ್ ಕೃಷಿ ಅಭಿಯಾನವನ್ನು ಆರಂಭಿಸಿತ್ತು. ಇದರಡಿ ರೈತರ ದೃಢೀಕೃತ ಡಿಜಿಟಲ್ ದತ್ತಾಂಶ ಸಂಗ್ರಹಿಸುವುದು ಮತ್ತು ಕೃಷಿ ಸೇವೆಗಳನ್ನು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ ಜೋಡಿಸುವುದಕ್ಕೆ ಆದ್ಯತೆ ನೀಡಲಾಗಿದೆ.
ಸಚಿವಾಲಯದ ಪ್ರಕಾರ, ರೈತರ ವಿಶಿಷ್ಟ ಡಿಜಿಟಲ್ ಗುರುತಿನ ಆಧಾರದಲ್ಲಿ ಸೇವೆಗಳನ್ನು ಒದಗಿಸುವ ವ್ಯವಸ್ಥೆಯ ಮೂಲಕ ಇದುವರೆಗೆ ಆರು ಕೋಟಿಗೂ ಹೆಚ್ಚು ರೈತರಿಗೆ ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನ ತಲುಪಿಸಲಾಗಿದೆ. ದೃಢೀಕೃತ ರೈತರ ದತ್ತಾಂಶದಿಂದ ನಕಲಿ ಫಲಾನುಭವಿಗಳನ್ನು ಪತ್ತೆಹಚ್ಚಲು, ಪದೇಪದೆ ಪರಿಶೀಲನೆ ನಡೆಸುವ ಅಗತ್ಯವನ್ನು ಕಡಿಮೆ ಮಾಡಲು ಹಾಗೂ ಸರ್ಕಾರಿ ಇಲಾಖೆಗಳ ನಡುವಿನ ಸಮನ್ವಯವನ್ನು ಸುಧಾರಿಸಲು ಸಾಧ್ಯವಾಗಲಿದೆ. ಅಲ್ಲದೆ, ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಯೂ ಪರಿಣಾಮಕಾರಿಯಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
ಅರ್ಹ ರೈತರಿಗೆ ಸೌಲಭ್ಯ ತಲುಪಿಸಲು ಕ್ರಮ
ಈ ಸಾಧನೆಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳ ಆಡಳಿತ, ಜಿಲ್ಲಾ ಮಟ್ಟದ ತಂಡಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಸಂಘಟಿತ ಪ್ರಯತ್ನ ಕಾರಣವಾಗಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ಸಹಕಾರಿ ಒಕ್ಕೂಟ ವ್ಯವಸ್ಥೆಯ ಅತ್ಯುತ್ತಮ ಉದಾಹರಣೆ ಎಂದು ಬಣ್ಣಿಸಿರುವ ಅವರು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಗೇಣಿದಾರ ರೈತರು ಹಾಗೂ ವಾಸ್ತವವಾಗಿ ಕೃಷಿ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ರೈತರನ್ನೂ ನಿಗದಿತ ನಿಯಮಗಳ ಪ್ರಕಾರ ಡಿಜಿಟಲ್ ರೈತ ನೋಂದಣಿಗೆ ಸೇರಿಸಲು ಪ್ರಯತ್ನಗಳು ನಡೆಯುತ್ತಿವೆ. ಈ ಮೂಲಕ ಯಾವುದೇ ಅರ್ಹ ರೈತರು ಸರ್ಕಾರಿ ಯೋಜನೆಗಳ ಪ್ರಯೋಜನದಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.