ಪ್ರಧಾನಿ ಮೋದಿ ಭಾನುವಾರ ವಾರಾಣಸಿಯಲ್ಲಿ ವಾಯುಪಡೆಯ ವೈಮಾನಿಕ ಪ್ರದರ್ಶನ ವೀಕ್ಷಣೆ; ಭುವನೇಶ್ವರದಲ್ಲಿ ಆರ್ಬಿಐ ದತ್ತಾಂಶ ಕೇಂದ್ರ ಉದ್ಘಾಟನೆ
ನವದೆಹಲಿ, 24 ಅಕ್ಟೋಬರ್ (ಹಿ.ಸ.): ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉತ್ತರ ಪ್ರದೇಶ ಮತ್ತು ಒಡಿಶಾ ರಾಜ್ಯಗಳಿಗೆ ಭೇಟಿ ನೀಡಲಿದ್ದು, ವಾರಾಣಸಿಯಲ್ಲಿ ನೂತನ ಜವಳಿ ಉತ್ಪಾದನಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಭಾರತೀಯ ವಾಯುಪಡೆಯ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ. ನಂತರ ಭುವ
प्रधानमंत्री नरेन्द्र मोदी (फाइल फोटो)


ನವದೆಹಲಿ, 24 ಅಕ್ಟೋಬರ್ (ಹಿ.ಸ.):

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉತ್ತರ ಪ್ರದೇಶ ಮತ್ತು ಒಡಿಶಾ ರಾಜ್ಯಗಳಿಗೆ ಭೇಟಿ ನೀಡಲಿದ್ದು, ವಾರಾಣಸಿಯಲ್ಲಿ ನೂತನ ಜವಳಿ ಉತ್ಪಾದನಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಭಾರತೀಯ ವಾಯುಪಡೆಯ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ. ನಂತರ ಭುವನೇಶ್ವರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ನೂತನ ದತ್ತಾಂಶ ಕೇಂದ್ರ ಹಾಗೂ ಸೈಬರ್ ಭದ್ರತಾ ತರಬೇತಿ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.

ಪ್ರಧಾನಿ ಕಚೇರಿ ಶನಿವಾರ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಮೋದಿ ಅವರು ಬೆಳಿಗ್ಗೆ ಸುಮಾರು 11 ಗಂಟೆಗೆ ವಾರಾಣಸಿಯಲ್ಲಿ ಅರವಿಂದ್ ಲಿಮಿಟೆಡ್‌ನ ನೂತನ ಜವಳಿ ಉತ್ಪಾದನಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ಸುಮಾರು 1 ಗಂಟೆಗೆ ನಮೋ ಘಾಟ್‌ನಲ್ಲಿ ನಡೆಯಲಿರುವ 2026ರ ವಾಯುಪಡೆ ದಿನದ ವೈಮಾನಿಕ ಪ್ರದರ್ಶನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಜವಳಿ ಉದ್ಯಮಕ್ಕೆ ಉತ್ತೇಜನ

ವಾರಾಣಸಿಯಲ್ಲಿ ಸ್ಥಾಪಿಸಿರುವ ನೂತನ ಉತ್ಪಾದನಾ ಕೇಂದ್ರವು ದೇಶದ ಜವಳಿ ಮತ್ತು ಉಡುಪು ಉದ್ಯಮವನ್ನು ಬಲಪಡಿಸುವುದರ ಜತೆಗೆ ಸ್ಥಳೀಯ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. ಆಧುನಿಕ ಉತ್ಪಾದನಾ ವಿಧಾನಗಳಿಗೆ ಆದ್ಯತೆ ನೀಡುವ ಈ ಕೇಂದ್ರವು ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಇಲ್ಲಿ ತಯಾರಾಗುವ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಪರಿಚಯಿಸಲಾಗುವುದು. ಮಹಿಳಾ ನೇತೃತ್ವದ ಅಭಿವೃದ್ಧಿಗೆ ಉತ್ತೇಜನ ನೀಡುವ ಈ ಯೋಜನೆಯು ವಾರಾಣಸಿಯನ್ನು ಅಂತರರಾಷ್ಟ್ರೀಯ ಜವಳಿ ಉತ್ಪಾದನಾ ಮಾರುಕಟ್ಟೆಯೊಂದಿಗೆ ಸಂಪರ್ಕಿಸಲು ನೆರವಾಗಲಿದೆ.

ಗಂಗಾನದಿಯ ಮೇಲೆ ವಾಯುಪಡೆಯ ಸಾಹಸ ಪ್ರದರ್ಶನ

ಭಾರತೀಯ ವಾಯುಪಡೆಯ ಸ್ಥಾಪನೆಯಾಗಿ 94 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ವಾರಾಣಸಿಯಲ್ಲಿ ವೈಮಾನಿಕ ಪ್ರದರ್ಶನ ಆಯೋಜಿಸಲಾಗಿದೆ. ‘ಗಂಗಾನದಿಯ ಮೇಲೆ ಹಾರಾಟ’ ಎಂಬ ವಿಷಯದಡಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ತೇಜಸ್, ಪ್ರಚಂಡ ಲಘು ಯುದ್ಧ ಹೆಲಿಕಾಪ್ಟರ್, ಸುಖೋಯ್‌-30 ಎಂಕೆಐ ಮತ್ತು ರಫೇಲ್ ಸೇರಿದಂತೆ ವಿವಿಧ ವಿಮಾನಗಳು ಭಾಗವಹಿಸಲಿವೆ.

ಸಾಗಣೆ ವಿಮಾನಗಳ ಜತೆಗೆ ಭಾರತೀಯ ನೌಕಾಪಡೆ ಮತ್ತು ಭೂಸೇನೆಯ ವಿಮಾನಗಳೂ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. ಈ ಮೂಲಕ ಮೂರು ಸಶಸ್ತ್ರ ಪಡೆಗಳ ನಡುವಿನ ಜಂಟಿ ಕಾರ್ಯಾಚರಣೆಯ ಸಾಮರ್ಥ್ಯವನ್ನು ಪ್ರದರ್ಶಿಸಲಾಗುವುದು.

ವಾಯುಪಡೆಯ ಸೂರ್ಯ ಕಿರಣ್ ವೈಮಾನಿಕ ಕಸರತ್ತು ತಂಡ ಮತ್ತು ಸಾರಂಗ್ ಹೆಲಿಕಾಪ್ಟರ್ ಪ್ರದರ್ಶನ ತಂಡಗಳು ತಮ್ಮ ಸಾಹಸಗಳನ್ನು ಪ್ರದರ್ಶಿಸಲಿವೆ. ವಿಮಾನಗಳ ನಿಖರ ಹಾರಾಟ, ಪರಸ್ಪರ ಸಮನ್ವಯ ಮತ್ತು ಕಾರ್ಯಾಚರಣೆಯ ಸಾಮರ್ಥ್ಯವನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಗುವುದು.

ಭುವನೇಶ್ವರದಲ್ಲಿ ಆರ್‌ಬಿಐ ದತ್ತಾಂಶ ಕೇಂದ್ರ ಉದ್ಘಾಟನೆ

ವಾರಾಣಸಿಯ ಕಾರ್ಯಕ್ರಮಗಳ ಬಳಿಕ ಪ್ರಧಾನಿ ಒಡಿಶಾಕ್ಕೆ ತೆರಳಲಿದ್ದಾರೆ. ಸಂಜೆ ಸುಮಾರು 4.45ಕ್ಕೆ ಭುವನೇಶ್ವರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ನೂತನ ದತ್ತಾಂಶ ಕೇಂದ್ರ ಮತ್ತು ಸೈಬರ್ ಭದ್ರತಾ ತರಬೇತಿ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಆರ್‌ಬಿಐನ ನೂತನ ದತ್ತಾಂಶ ಕೇಂದ್ರವು ಬ್ಯಾಂಕಿನ ಗಣಕಯಂತ್ರ ಸಂಬಂಧಿತ ಅಗತ್ಯಗಳನ್ನು ಪೂರೈಸುವುದರ ಜತೆಗೆ ಹಣಕಾಸು ವಲಯಕ್ಕೆ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಭವಿಷ್ಯದ ಅಗತ್ಯಗಳಿಗೆ ಅನುಗುಣವಾದ ಡಿಜಿಟಲ್ ಮೂಲಸೌಕರ್ಯವನ್ನು ಒದಗಿಸಲಿದೆ. ಇಲ್ಲಿ ನಾಲ್ಕು ಅತ್ಯಾಧುನಿಕ ದತ್ತಾಂಶ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಹಣ ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳು ಸೇರಿದಂತೆ ಪ್ರಮುಖ ಸೇವೆಗಳನ್ನು ನಿರ್ವಹಿಸಲಾಗುವುದು.

ಈ ಕೇಂದ್ರಕ್ಕೆ ಅಪ್‌ಟೈಮ್ ಇನ್‌ಸ್ಟಿಟ್ಯೂಟ್‌ನ ನಾಲ್ಕನೇ ಹಂತದ ಗುಣಮಟ್ಟದ ಪ್ರಮಾಣೀಕರಣ ದೊರೆತಿದೆ. ದತ್ತಾಂಶ ಕೇಂದ್ರಗಳ ಮೂಲಸೌಕರ್ಯದಲ್ಲಿ ಅತ್ಯುನ್ನತ ಕಾರ್ಯಾಚರಣಾ ವಿಶ್ವಾಸಾರ್ಹತೆಯನ್ನು ಸೂಚಿಸುವ ಮಾನದಂಡಗಳಲ್ಲಿ ಇದೂ ಒಂದಾಗಿದೆ. ಇದರಿಂದ ಡಿಜಿಟಲ್ ಹಣಕಾಸು ಸೇವೆಗಳ ವ್ಯಾಪ್ತಿ, ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆ ಹೆಚ್ಚುವ ನಿರೀಕ್ಷೆಯಿದೆ.

ಸೈಬರ್ ಭದ್ರತಾ ತರಬೇತಿಗೆ ಆದ್ಯತೆ

ಭುವನೇಶ್ವರದಲ್ಲಿ ಸ್ಥಾಪಿಸಿರುವ ಸೈಬರ್ ಭದ್ರತಾ ತರಬೇತಿ ಸಂಸ್ಥೆಯು ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ಕ್ಷೇತ್ರಗಳಲ್ಲಿ ಸೈಬರ್ ಭದ್ರತೆ ಹಾಗೂ ತಂತ್ರಜ್ಞಾನ ಸಂಬಂಧಿತ ಸಾಮರ್ಥ್ಯಗಳನ್ನು ಬಲಪಡಿಸುವ ಉದ್ದೇಶ ಹೊಂದಿದೆ. ತರಬೇತಿ, ಸಂಶೋಧನೆ ಮತ್ತು ಕೌಶಲಾಭಿವೃದ್ಧಿಗೆ ಇಲ್ಲಿ ಆದ್ಯತೆ ನೀಡಲಾಗುತ್ತದೆ. ಕ್ವಾಂಟಮ್ ಗಣಕಯಂತ್ರ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆಯೂ ತರಬೇತಿ ನೀಡಲಾಗುತ್ತದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande