
ಕೋಲಾರ, ೨೪ ಅಕ್ಟೋಬರ್ (ಹಿ.ಸ) : ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಲ್ಲಿ ದಕ್ಷ ಆಡಳಿತ ನೀಡಲು ಶ್ರಮಿಸುತ್ತಿರುವ ನೂತನ ಅಧ್ಯಕ್ಷ, ಶಾಸಕ ಕೊತ್ತೂರು ಜಿ. ಮಂಜುನಾಥ್ ಅವರ ದಾರಿಗೆ ಭ್ರಷ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜಾಲ ಮುಳ್ಳಾಗುತ್ತಿದೆ ಎಂದು ಕರ್ನಾಟಕ ದಲಿತ ರೈತ ಸೇನೆ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್ ಆರೋಪಿಸಿದ್ದಾರೆ.
ಬ್ಯಾಂಕಿನ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಅಧ್ಯಕ್ಷರು ಪ್ರತಿದಿನ ಶ್ರಮಿಸುತ್ತಿದ್ದರೆ, ಇನ್ನೊಂದೆಡೆ ಅಧಿಕಾರಿಗಳು ಅವರ ಒಳ್ಳೆಯತನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಶಿಡ್ಲಘಟ್ಟ ಶಾಖೆಯಲ್ಲಿ 'ರಿಸೀವ್ ಅಬಲ್ ಹೆಡ್' ಮೂಲಕ ೨೦೨೨-೨೩ ನೇ ಸಾಲಿನಲ್ಲಿ ಲಿಖಿತ್ ಗೌಡ ಹಾಗೂ ಇತರರ ಖಾತೆಗಳಿಗೆ ನಿಯಮಬಾಹಿರವಾಗಿ ಹಣ ವರ್ಗಾವಣೆ ಮಾಡಿ, ನಂತರ ನಗದು ರೂಪದಲ್ಲಿ ಹಿಂಪಡೆದು ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರದಿಂದ ಬರಬೇಕಾದ ಬಡ್ಡಿ ಸಹಾಯಧನದ ಖಾತೆಗಳಾದ ಖಾತೆಗಳಿಂದ ಸುಮಾರು ರೂ. ೧.೯೭ ಕೋಟಿಗೂ ಅಧಿಕ ಮೊತ್ತವನ್ನು ಬ್ಯಾಂಕಿನ 'ಬಡ್ಡಿ ಆದಾಯ'ಕ್ಕೆ ಜಮೆ ಮಾಡಬೇಕಿತ್ತು. ಆದರೆ, ಇದನ್ನು ಸ್ವಸಹಾಯ ಗುಂಪುಗಳ ಸಾಲದ ಬಡ್ಡಿಗೆ ಎಂದು ತೋರಿಸಿ, ಅದರಲ್ಲಿ ₹೫೦ ಲಕ್ಷಕ್ಕೂ ಅಧಿಕ ಹಣವನ್ನು ಶಿಡ್ಲಘಟ್ಟ ಶಾಖೆಯ ವ್ಯವಸ್ಥಾಪಕ ಆನಂದ್, ಮೇಲ್ವಿಚಾರಕರಾದ ಶ್ರೀನಾಥ್ ಹಾಗೂ ಸಿಬ್ಬಂದಿ ಮಿಲನಶ್ರೀ ಸೇರಿ ಅಕ್ರಮವಾಗಿ ಖಾಸಗಿ ಖಾತೆಗಳಿಗೆ ವರ್ಗಾಯಿಸಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಮೂರು ವರ್ಷಕ್ಕೂ ಹೆಚ್ಚು ಕಾಲ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ತಕ್ಷಣ ವರ್ಗಾವಣೆ ಮಾಡುವಂತೆ ಅಧ್ಯಕ್ಷ ಕೊತ್ತೂರು ಮಂಜುನಾಥ್ ಅವರು ಸ್ಪಷ್ಟ ಆದೇಶ ನೀಡಿದ್ದರು. ಆದರೂ, ಕಳೆದ ೧೦ ವರ್ಷಗಳಿಂದ ಶಿಡ್ಲಘಟ್ಟ ಶಾಖೆಯಲ್ಲೇ ಟಿಕಾಣಿ ಹೂಡಿರುವ ವ್ಯವಸ್ಥಾಪಕ ಆನಂದ್ ಹಾಗೂ ಅಕ್ರಮದಲ್ಲಿ ಭಾಗಿಯಾದವರನ್ನು ಎಂ.ಡಿ. ವೆಂಕಟೇಶ್.ಎನ್ ಅವರು ವರ್ಗಾಯಿಸದೆ ರಕ್ಷಣೆ ನೀಡುತ್ತಿದ್ದಾರೆ. ಈ ಅಕ್ರಮದ ಸಂಪೂರ್ಣ ಮಾಹಿತಿ ಎಂ.ಡಿ ಅವರಿಗೆ ತಿಳಿದಿದ್ದರೂ, ತಪ್ಪಿತಸ್ಥರು ಹಣ ಮರುಪಾವತಿಸಲು ಕಾಲಾವಕಾಶ ಕೇಳಿದ್ದಾರೆ ಎಂಬ ನೆಪವೊಡ್ಡಿ ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳದೆ ವಿನಾಯಿತಿ ನೀಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.
ಲಕ್ಷಾAತರ ರೂಪಾಯಿ ಬ್ಯಾಂಕ್ ಹಣವನ್ನು ಲೂಟಿ ಮಾಡಿದ ನಂತರ 'ಹಣ ಮರುಪಾವತಿಸುತ್ತೇವೆ' ಎಂದ ತಕ್ಷಣ ಕರಾರಿಗೆ ಒಪ್ಪಿ ವಿನಾಯಿತಿ ನೀಡುವುದು ಸರಿಯಲ್ಲ. ಬ್ಯಾಂಕಿನ ಎಲ್ಲಾ ಸಿಬ್ಬಂದಿಗೂ ಒಂದೇ ನ್ಯಾಯವಿರಬೇಕು. ಕೂಡಲೇ ಈ ಅಕ್ರಮದ ಕುರಿತು ಸೂಕ್ತ ತನಿಖೆ ನಡೆಸಿ, ಭಾಗಿಗಳಾದ ಸಿಬ್ಬಂದಿಯನ್ನು ಅಮಾನತುಗೊಳಿಸಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ನಂತರವಷ್ಟೇ ಹಣ ವಸೂಲಿ ಮಾಡುವ ಕೆಲಸವಾಗಬೇಕು ಎಂದು ಹುಣಸನಹಳ್ಳಿ ವೆಂಕಟೇಶ್ ಒತ್ತಾಯಿಸಿದ್ದಾರೆ.
ಅಧ್ಯಕ್ಷರ ಗಮನಕ್ಕೆ ಈ ವಿಷಯ ತಲುಪದಂತೆ ಮುಚ್ಚಿಹಾಕಲು ಯತ್ನಿಸುತ್ತಿರುವ ಹಾಗೂ ಬ್ಯಾಂಕಿನ ಹೆಸರಿಗೆ ಮಸಿ ಬಳಿಯುತ್ತಿರುವ ಭ್ರಷ್ಟ ಸಿಬ್ಬಂದಿ ವಿರುದ್ಧ ನೂತನ ಅಧ್ಯಕ್ಷರು ಕಠಿಣ ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್