ಯಲವಾರದಲ್ಲಿ ಶ್ರೀ ಅಕ್ಕೋಜಮ್ಮನವರ ದೇವಾಲಯದ ಜೀರ್ಣೋದ್ಧಾರಕ್ಕೆ ಚಾಲನೆ
ಯಲವಾರದಲ್ಲಿ ಶ್ರೀ ಅಕ್ಕೋಜಮ್ಮನವರ ದೇವಾಲಯದ ಜೀರ್ಣೋದ್ಧಾರಕ್ಕೆ ಚಾಲನೆ
ಕೋಲಾರ ತಾಲೂಕಿನ ಶ್ರೀ ಅಕ್ಕೋಜಮ್ಮನವರ ದೇವಾಲಯದ ಜೀರ್ಣೋದ್ಧಾರಕ್ಕೆ ಯಲವಾರದಲ್ಲಿ ಸಮುದಾಯದ ಮುಖಂಡರು ಚಾಲನೆ ನೀಡಿದರು.


ಕೋಲಾರ, ೨೪ ಅಕ್ಟೋಬರ್ (ಹಿ.ಸ) : ತಾಲೂಕಿನ ಕಾಮಧೇನಹಳ್ಳಿ, ಯಳಚಿಪುರ ಹಾಗೂ ಯಲವಾರ ಗ್ರಾಮಗಳಲ್ಲಿ ವಾಸಿಸುವ ಖಡ್ಗಲಿಗರ ಗೋತ್ರದಲ್ಲಿ ಜನಿಸಿರುವ ಒಕ್ಕಲಿಗರ ಸಮುದಾಯದವರ ಕುಲದೇವತೆ ಶ್ರೀ ಅಕ್ಕೋಜಮ್ಮನವರ ದೇವಾಲಯದ ಜೀರ್ಣೋದ್ಧಾರಕ್ಕೆ ಯಲವಾರದಲ್ಲಿ ಸಮುದಾಯದ ಮುಖಂಡರು ಚಾಲನೆ ನೀಡಿದರು.

ಈ ವೇಳೆ ಹಿರಿಯ ಮುಖಂಡ ಬಾಬು ಮೌನಿ ಮಾತನಾಡಿ, ೨೦೨೭ರ ಏಪ್ರಿಲ್ ೮ರಂದು ಒಕ್ಕಲಿಗ ಸಮುದಾಯದ ಖಡ್ಗಲಿಗರ ಗೋತ್ರದವರ ದೊಡ್ಡ ದ್ಯಾವರ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ನಮ್ಮ ಕುಲದೇವತೆಯ ಇತಿಹಾಸ ಪ್ರಸಿದ್ಧ ಶ್ರೀ ಅಕ್ಕೋಜಮ್ಮನವರ ದೇವಾಲಯದ ಜೀರ್ಣೋದ್ಧಾರಕ್ಕೆ ನಾವೆಲ್ಲರೂ ಮುಂದಾಗಿದ್ದೇವೆ. ದ್ಯಾವರ ನಡೆಯುವ ವೇಳೆ ಒಳಗಾಗಿ ಹಳೆಯ ದೇವಾಲಯವನ್ನು ಕೆಡವಿ, ಸುಂದರವಾಗಿ ನಿರ್ಮಿಸಲು ಹಾಗೂ ಈಗಾಗಲೇ ಗುಡಿಯಲ್ಲಿರುವ ಮೂಲ ದೇವರುಗಳ ಮತ್ತು ಚಿತ್ರಕಲೆಯನ್ನು ಯಥಾವತ್ತಾಗಿ ಕಾಪಾಡಿಕೊಂಡು ಹೋಗುತ್ತೇವೆ ಎಂದರು.

ಒಕ್ಕಲಿಗ ಸಮುದಾಯದಲ್ಲೇ ಖಡ್ಗಲಿಗರ ಗೋತ್ರದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಜ್ಯ, ದೇಶ, ವಿದೇಶಗಳಲ್ಲಿ ಜೀವನ ಕಟ್ಟಿಕೊಂಡು ಬಾಳ್ವೆ ನಡೆಸುತ್ತಿದ್ದಾರೆ. ದ್ಯಾವರ ಸಮಯದಲ್ಲಿ ೫೦೦ಕ್ಕೂ ಹೆಚ್ಚು ಕುಟುಂಬದವರು ಒಂದೇ ಸ್ಥಳದಲ್ಲಿ ಸೇರಿ ಕುಟುಂಬ ಸಮೇತವಾಗಿ ಸಂತೋಷದಿAದ ಅಕ್ಕೋಜಮ್ಮನವರ ದೇವಾಲಯದ ಮುಂದೆ ಕಿವಿ ಚುಚ್ಚುವ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ನಮ್ಮ ಗೋತ್ರದ ಕುಲಬಾಂಧವರು ದೇವಾಲಯ ಜೀರ್ಣೋದ್ಧಾರಕ್ಕಾಗಿ ತನು, ಮನ, ಧನ ಅರ್ಪಿಸಬೇಕೆಂದು ಮನವಿ ಮಾಡಿದರು.

ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿ ಈಗಿನ ತಮಿಳುನಾಡು ಪ್ರದೇಶದ ಯಳಂಜಿಪುರ ಗ್ರಾಮದಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕುಟುಂಬ ವಾಸಿಸುತ್ತಿತ್ತು. ಆ ಕುಟುಂಬದ ಸುಂದರವಾದ ಹೆಣ್ಣು ಮಗುವಾದ ಶ್ರೀ ಅಕ್ಕೋಜಮ್ಮನವರ ಮೇಲೆ ಮಹಾರಾಜನೊಬ್ಬ ಆಸೆಪಟ್ಟು ಆಕೆಯನ್ನು ಮದುವೆಯಾಗಲು ಎಲ್ಲಾ ರೀತಿಯಲ್ಲಿ ಪ್ರಯತ್ನ ಪಟ್ಟು ವಿಫಲನಾದ. ಅವನ ನಡವಳಿಕೆ, ಚರಿತ್ರೆ ಸರಿಯಿಲ್ಲದ ಕಾರಣ, ಆ ಕುಟುಂಬವು ಅಲ್ಲಿಂದ ತಪ್ಪಿಸಿಕೊಂಡು, ಪಾಲಾರ್ ನದಿ ಮಾರ್ಗವಾಗಿ ಇಲ್ಲಿನ ಯಲವಾರ ಗ್ರಾಮದಲ್ಲಿ ಬೀಡು ಬಿಟ್ಟು, ವ್ಯವಸಾಯ ಮಾಡುವ ಮೂಲಕ ಜೀವನ ಸಾಗಿಸುತ್ತಾರೆ. ಇಲ್ಲಿಗೆ ಹುಡುಕಿಕೊಂಡು ಬಂದ ಪಾಳೇಗಾರ ಆಕೆಯನ್ನು ವಶಪಡಿಸಿಕೊಳ್ಳಲಾಗದ ಕಾರಣ ಶಿರಶ್ಚೇಧವನ್ನು ಮಾಡುತ್ತಾನೆ ಎಂದು ಇತಿಹಾಸವನ್ನು ವಿವರಿಸಿದರು.

೧೯ ವರ್ಷದ ಶ್ರೀ ಅಕ್ಕೋಜಮ್ಮನವರ ತಲೆ, ಮೇಲೆ ಹಾರಿ, ೨೦ ವರ್ಷಕ್ಕೊಮ್ಮೆ ನನ್ನನ್ನು ಪೂಜಿಸಿ ಎಂದು ಆಜ್ಞೆ ಮಾಡುತ್ತಾರೆ. ಅವರ ಜ್ಞಾಪಕರ್ತವಾಗಿ ನಮ್ಮ ಕುಲದ ಹೆಣ್ಣು ಮಕ್ಕಳಿಗೆ ೨೦ ವರ್ಷ ತುಂಬಿದ ಮೇಲೆ ಮದುವೆ ಮಾಡುತ್ತೇವೆ, ಕಿವಿ ಚುಚ್ಚುತ್ತೇವೆ ಹಾಗೂ ದ್ಯಾವರ ಮಾಡುವ ಮೂಲಕ ನಮ್ಮ ಕುಲದೇವತೆಯನ್ನು ಪೂಜಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಡಾ.ವೆಂಕಟಾಚಲಗೌಡ ಮಾತನಾಡಿ, ೨೦ವರ್ಷಕೊಮ್ಮೆ ನಡೆಯುವ ದ್ಯಾವರ ಯಾವ ಮೂಢನಂಬಿಕೆ ಅಲ್ಲ, ವಿಜ್ಞಾನ ಪೂರಕವಾಗಿ ಬಾಲ್ಯ ವಿವಾಹ ತಡೆಗಟ್ಟುವ, ನಮ್ಮ ಗೋತ್ರದವರನ್ನು ಮದುವೆಯಾಗದೆ ಬೇರೆ ವಂಶಸ್ಥರ ಮಕ್ಕಳನ್ನು ಮದುವೆಯಾಗುವುದು ಆರೋಗ್ಯಕ್ಕೆ ಉತ್ತಮ. ನಮ್ಮ ಗೋತ್ರದವರನ್ನೇ ಮದುವೆಯಾದರೆ ಅನೀಮಿಯ ಕಾಯಿಲೆಯಿಂದಾಗಿ ಮಕ್ಕಳಿಗೆ ಅಂಗ ವೈಫಲ್ಯ ಹೆಚ್ಚಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡ ವೈ.ಸಿ.ಮುನೇಗೌಡ, ಮಾತನಾಡಿ, ಈ ಶತಮಾನದಲ್ಲಿ ಖಡ್ಗಲಿಗರ ಕುಲಮಾತೆ ಶ್ರೀ ಅಕ್ಕೋಜಮ್ಮನವರ ದೇವಾಲಯದ ಜೀರ್ಣೋದ್ಧಾರ ಮಾಡುತ್ತಿರುವುದು ನಮಗೆ ಸಂತೋಷವಾಗಿದೆ. ೨೦ ವರ್ಷಕ್ಕೆ ನಡೆಯುವ ದ್ಯಾವರದಲ್ಲಿ ನಮ್ಮ ಕುಲಬಾಂಧವರು ಒಟ್ಟಿಗೆ ಸೇರಿ ಪೂಜೆ ಸಲ್ಲಿಸುವ ಜೊತೆಗೆ, ಮುಂದಿನ ತಲೆಮಾರಿಗೆ ನಮ್ಮ ಇತಿಹಾಸವು ತಿಳಿಸುವ ಅವಶ್ಯಕತೆ ಇದೆ ಎಂದರು.

ದ್ಯಾವರ ಸಮೀಪ ಬರುತ್ತಿರುವ ಕಾರಣ ಕಾಮಧೇನಹಳ್ಳಿ, ಯಳಚಿಪುರ ಹಾಗೂ ಯಲವಾರ ಗ್ರಾಮಗಳಲ್ಲಿರುವ ಒಕ್ಕಲಿಗ ಸಮುದಾಯದ ಕರಗ ದೇವಾಲಯಗಳನ್ನು ಈಗಾಗಲೇ ಜೀರ್ಣೋದ್ಧಾರ ಮಾಡಿ ಸಿಂಗಾರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯ ಮುಖಂಡರಾದ ಕೆ.ಎಂ.ನಾಗರಾಜ್, ಕೆ.ಆರ್.ಬೈರೇಗೌಡ, ಎಂ.ನಾರಾಯಣಸ್ವಾಮಿ, ಕೆ.ಎನ್.ಗೋಪಾಲ್ ಗೌಡ, ಆರ್.ವಿ.ಚೌಡಪ್ಪ, ಕೆ.ಆರ್.ಚೌಡಪ್ಪ, ಕೆ.ಆರ್.ಅರುಣ್ ಕುಮಾರ್, ಮುನಿಸ್ವಾಮಿಗೌಡ, ಕೆ.ಎಂ.ರವಿಚAದ್ರ, ವೈ.ವಿ.ವೆಂಕಟಸ್ವಾಮಿ, ರಾಜಕುಮಾರ್, ನಾರಾಯಣಸ್ವಾಮಿ, ಕೆ.ಸಿ.ಜಗದೀಶ್, ಕೆ.ಎಂ.ಮೈಲೇಗೌಡ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande