
ನವದೆಹಲಿ, 22 ಅಕ್ಟೋಬರ್ (ಹಿ.ಸ.):
ಯಮುನಾ ನದಿಯ ಪುನರುಜ್ಜೀವನಕ್ಕಾಗಿ ದೆಹಲಿ ಜಲ ಮಂಡಳಿಯ 43 ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಶ್ಯಾಮ್ ವಿಹಾರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು. ಒಟ್ಟು 8,941 ಕೋಟಿ ರೂ. ವೆಚ್ಚದ ಈ ಯೋಜನೆಗಳ ಪೈಕಿ 2,827.11 ಕೋಟಿ ರೂ. ವೆಚ್ಚದ 10 ಯೋಜನೆಗಳನ್ನು ಉದ್ಘಾಟಿಸಲಾಗಿದ್ದು, 6,114.11 ಕೋಟಿ ರೂ. ವೆಚ್ಚದ 33 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಯಮುನಾ ನದಿಯನ್ನು ಸ್ವಚ್ಛಗೊಳಿಸಿ 2029ರಲ್ಲಿ ಮತ ಕೇಳಲು ಬರುತ್ತೇವೆ ಎಂದು ಅಮಿತ್ ಶಾ ಹೇಳಿದರು. ಕಳೆದ 30 ವರ್ಷಗಳಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಯಮುನಾ ನದಿಗೆ ಒಳಚರಂಡಿ ನೀರು ಮತ್ತು ದನಗಳ ಸಗಣಿಯನ್ನು ಹರಿಸುವ ಕೆಲಸ ಮಾಡಿವೆ ಎಂದು ಆರೋಪಿಸಿದರು.
ಯಮುನಾ ನದಿಯನ್ನು ಶುದ್ಧೀಕರಿಸುವ ಉದ್ದೇಶದಿಂದ ಸುಮಾರು 9,000 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಇಂದು ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಯೋಜನೆಗಳು ಯಮುನಾ ನದಿಯ ಸ್ವಚ್ಛತಾ ಕಾರ್ಯಕ್ಕೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸಲಿವೆ ಎಂದು ಅವರು ತಿಳಿಸಿದರು.
ದೆಹಲಿಯಲ್ಲಿ ಸರ್ಕಾರ ರಚನೆಯಾದ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ತಿಂಗಳಲ್ಲೇ ಮಹತ್ವದ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ದೆಹಲಿ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯದ ಮುಂದೆ ಯಮುನಾ ನದಿಯನ್ನು ಶುದ್ಧೀಕರಿಸುವ ತಮ್ಮ ದೃಷ್ಟಿಕೋನವನ್ನು ಮಂಡಿಸಿದ್ದರು. ಅಲ್ಪಾವಧಿಯಲ್ಲೇ ಈ ಗುರಿಯತ್ತ ಶೇ. 40ಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ ಎಂದು ಅಮಿತ್ ಶಾ ಹೇಳಿದರು.
ಒಳಚರಂಡಿ ಸಂಸ್ಕರಣೆ, ಜಲಶುದ್ಧೀಕರಣಕ್ಕೆ ಆದ್ಯತೆ
ಯಮುನಾ ಪುನರುಜ್ಜೀವನ ಯೋಜನೆಗಳ ಭಾಗವಾಗಿ ಹಲವು ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅವುಗಳಲ್ಲಿ 1,161 ಕೋಟಿ ರೂ. ವೆಚ್ಚದಲ್ಲಿ ಓಖ್ಲಾದಲ್ಲಿ ದಿನಕ್ಕೆ 124 ದಶಲಕ್ಷ ಗ್ಯಾಲನ್ ಸಾಮರ್ಥ್ಯದ ಹೊಸ ಒಳಚರಂಡಿ ನೀರು ಸಂಸ್ಕರಣಾ ಘಟಕ ನಿರ್ಮಾಣ, 1,041 ಕೋಟಿ ರೂ. ವೆಚ್ಚದಲ್ಲಿ ಎಂಟು ಸಂಸ್ಕರಣಾ ಘಟಕಗಳ ಉನ್ನತೀಕರಣ ಸೇರಿವೆ.
ಇದಲ್ಲದೆ, ಹೊರ ದೆಹಲಿಯಲ್ಲಿ 3,113.67 ಕೋಟಿ ರೂ. ವೆಚ್ಚದಲ್ಲಿ 29 ಹೊಸ ವಿಕೇಂದ್ರೀಕೃತ ಒಳಚರಂಡಿ ನೀರು ಸಂಸ್ಕರಣಾ ಘಟಕಗಳು ಮತ್ತು ಒಳಚರಂಡಿ ಪಂಪಿಂಗ್ ಕೇಂದ್ರಗಳ ನಿರ್ಮಾಣ, 1,691 ಕೋಟಿ ರೂ. ವೆಚ್ಚದಲ್ಲಿ 1,034 ಕಿ.ಮೀ. ಉದ್ದದ ಒಳಚರಂಡಿ ಜಾಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಚಂದ್ರಾವಲ್ನಲ್ಲಿ 298.3 ಕೋಟಿ ರೂ. ವೆಚ್ಚದಲ್ಲಿ ದಿನಕ್ಕೆ 477 ದಶಲಕ್ಷ ಲೀಟರ್ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ನಿರ್ಮಾಣ ಹಾಗೂ 225.02 ಕೋಟಿ ರೂ. ವೆಚ್ಚದಲ್ಲಿ 4.5 ಕಿ.ಮೀ. ಉದ್ದದ ಮುಂಡ್ಕಾ ಮುಖ್ಯ ಒಳಚರಂಡಿ ಕಾಲುವೆ ನಿರ್ಮಾಣವೂ ಯೋಜನೆಗಳಲ್ಲಿ ಸೇರಿವೆ.
ವಿರೋಧ ಪಕ್ಷದ ಪ್ರತಿಭಟನೆಗೆ ಅಮಿತ್ ಶಾ ಟೀಕೆ
ವಿರೋಧ ಪಕ್ಷಗಳ ಪ್ರತಿಭಟನೆ ಕುರಿತು ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತಗಳ್ಳತನದ ನೆಪದಲ್ಲಿ ವಾಸ್ತವವಾಗಿ ಒಳನುಸುಳುಕೋರರ ಮತಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಕಳೆದ 41 ವರ್ಷಗಳಿಂದ ಗುಜರಾತ್ನಲ್ಲಿ ಮತ್ತು 18 ವರ್ಷಗಳಿಂದ ದೆಹಲಿಯಲ್ಲಿ ಚುನಾವಣೆಯಲ್ಲಿ ಗೆದ್ದಿಲ್ಲ ಎಂದು ಹೇಳಿದ ಅವರು, ಮುಂದಿನ 30 ವರ್ಷಗಳ ಕಾಲವೂ ಭಾರತೀಯ ಜನತಾ ಪಕ್ಷದ ಸರ್ಕಾರವೇ ಅಧಿಕಾರದಲ್ಲಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರತಿ ಆರು ತಿಂಗಳಿಗೊಮ್ಮೆ ತಾವು ವಿದೇಶಕ್ಕೆ ಹೋಗುವ ಅಗತ್ಯವಿಲ್ಲ ಎಂದು ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಟೀಕಿಸಿದರು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದೂ ಹೇಳಿದರು.
ಯಮುನಾ ನದಿಯ ಸ್ವಚ್ಛತೆಗಾಗಿ ಆಮ್ ಆದ್ಮಿ ಪಕ್ಷ ಯಾವುದೇ ಕೆಲಸ ಮಾಡಿಲ್ಲ ಎಂದು ಆರೋಪಿಸಿದ ಅವರು, ಧರಣಿ ಮತ್ತು ಪ್ರತಿಭಟನೆಗಳಿಂದ ಯಾವುದೇ ಪ್ರಯೋಜನವಿಲ್ಲ. ಜನರ ನೋವು-ನಲಿವುಗಳಿಗೆ ಸ್ಪಂದಿಸಿ ಕೆಲಸ ಮಾಡುವುದರಿಂದ ಮಾತ್ರ ಅಧಿಕಾರ ದೊರೆಯುತ್ತದೆ ಎಂದು ಹೇಳಿದರು.
ಪಂಜಾಬ್ನಲ್ಲಿ ಮಾದಕವಸ್ತುಗಳ ವ್ಯಾಪಾರ ನಿರ್ಮೂಲನೆ ಗುರಿ
ಆಮ್ ಆದ್ಮಿ ಪಕ್ಷದ ಆಡಳಿತಾವಧಿಯಲ್ಲಿ ಪಂಜಾಬ್ನಲ್ಲಿ ಮಾದಕವಸ್ತುಗಳ ವ್ಯಾಪಾರ ಹೆಚ್ಚಾಗಿದೆ ಎಂದು ಅಮಿತ್ ಶಾ ಆರೋಪಿಸಿದರು. ಜನರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸರ್ಕಾರವನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ ಎಂದು ಹೇಳಿದರು.
ದೆಹಲಿ ಚುನಾವಣೆಯಲ್ಲಿ ಸೋತ ಬಳಿಕ ಆಮ್ ಆದ್ಮಿ ಪಕ್ಷವು ಪಂಜಾಬ್ನತ್ತ ಗಮನ ಹರಿಸಿದ್ದು, ಇದರಿಂದ ಅಲ್ಲಿನ ಮುಖ್ಯಮಂತ್ರಿ ತಮ್ಮ ಕೆಲಸ ನಿರ್ವಹಿಸಲು ಅಡ್ಡಿಯಾಗುತ್ತಿದೆ ಎಂದು ಟೀಕಿಸಿದರು. ಪಂಜಾಬ್ನ ಮುಂದಿನ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸಂಪೂರ್ಣ ಸೋಲು ಅನುಭವಿಸಲಿದೆ ಎಂದು ಭವಿಷ್ಯ ನುಡಿದರು.
2029ರ ವೇಳೆಗೆ ಪಂಜಾಬ್ನಿಂದ ಮಾದಕವಸ್ತುಗಳ ವ್ಯಾಪಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಅಮಿತ್ ಶಾ ಹೇಳಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.