
ಲಕ್ನೋ, 22 ಅಕ್ಟೋಬರ್ (ಹಿ.ಸ.):
ಉತ್ತರ ಪ್ರದೇಶದಲ್ಲಿ 2027ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಚಟುವಟಿಕೆಗಳನ್ನು ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಲಖನೌದ ಆಶಿಯಾನದಲ್ಲಿರುವ ಚಾನ್ಸಲರ್ ಕ್ಲಬ್ನಲ್ಲಿ ಸಂಘದ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಪಾಲ್ಗೊಳ್ಳಲು ಸಂಘದ ಸಹ ಸರಕಾರ್ಯವಾಹರಾದ ಅರುಣ್ ಕುಮಾರ್ ಮತ್ತು ಅತುಲ್ ಲಿಮಯೆ ಗುರುವಾರ ಲಖನೌಗೆ ಆಗಮಿಸಿದ್ದಾರೆ.
ಇಬ್ಬರು ಸಹ ಸರಕಾರ್ಯವಾಹರ ಉಪಸ್ಥಿತಿಯಲ್ಲಿ ನಡೆಯುತ್ತಿರುವ ಈ ಸಭೆಯನ್ನು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದ ಮಹತ್ವದ್ದೆಂದು ಪರಿಗಣಿಸಲಾಗಿದೆ. ಸಂಘದ ಶತಮಾನೋತ್ಸವ ವರ್ಷದ ಕಾರ್ಯಕ್ರಮಗಳು ಪೂರ್ಣಗೊಂಡ ಬಳಿಕ ಸಂಘವು ಉತ್ತರ ಪ್ರದೇಶದತ್ತ ಹೆಚ್ಚಿನ ಗಮನ ಹರಿಸಿದೆ. ಇದರ ಭಾಗವಾಗಿ ಸಮಾಜದ ವಿವಿಧ ವರ್ಗಗಳನ್ನು ತಲುಪಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.
ಸಭೆಗೆ ಅವಧ್ ಮತ್ತು ಕಾನ್ಪುರ ಪ್ರಾಂತಗಳ ಸಂಘದ ಪದಾಧಿಕಾರಿಗಳು ಹಾಗೂ ಸಂಘದ ವಿಚಾರಧಾರೆಗೆ ಪೂರಕವಾಗಿ ಕಾರ್ಯನಿರ್ವಹಿಸುವ ವಿವಿಧ ಸಂಘಟನೆಗಳ ಪ್ರಾಂತೀಯ ಪದಾಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಇದರೊಂದಿಗೆ ಆರು ಪ್ರಾಂತಗಳ ಪ್ರಾಂತ ಪ್ರಚಾರಕರು, ಪೂರ್ವ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕ್ಷೇತ್ರ ಪ್ರಚಾರಕರು ಹಾಗೂ ಎರಡೂ ಕ್ಷೇತ್ರಗಳ ವಿವಿಧ ಸಂಘಟನೆಗಳ ಕ್ಷೇತ್ರೀಯ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ.
ಇತ್ತೀಚೆಗೆ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ನಾಲ್ಕು ದಿನಗಳ ಭೇಟಿಗಾಗಿ ಲಖನೌಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಕ್ಷೇತ್ರದ ಪ್ರಮುಖ ಸಮಿತಿಯೊಂದಿಗೆ ಸಭೆ ನಡೆಸಿದ್ದರು. ಅಲ್ಲದೆ, ಸಂಘದ ಕ್ಷೇತ್ರೀಯ ಪದಾಧಿಕಾರಿಗಳು ಮತ್ತು ಹಿರಿಯ ಪ್ರಚಾರಕರೊಂದಿಗೂ ಚರ್ಚೆ ನಡೆಸಿದ್ದರು. ಕೆಲವು ಪದಾಧಿಕಾರಿಗಳೊಂದಿಗೆ ವೈಯಕ್ತಿಕ ಮಾತುಕತೆಯನ್ನೂ ನಡೆಸಿದ್ದರು. ಸರಕಾರ್ಯವಾಹರು ನೀಡಿದ ಸೂಚನೆಗಳ ಅನುಷ್ಠಾನದ ಭಾಗವಾಗಿಯೂ ಪ್ರಸ್ತುತ ಸಭೆಯನ್ನು ನೋಡಲಾಗುತ್ತಿದೆ.
ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಘಕ್ಕೆ ಸಂಬಂಧಿಸಿದ ವಿವಿಧ ಸಂಘಟನೆಗಳ ಪ್ರತ್ಯೇಕ ಸಭೆಗಳನ್ನೂ ಆಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಸಭೆಗಳಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಚುನಾವಣೆಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ವಹಿಸುವ ಕುರಿತು ಚರ್ಚೆ ನಡೆಯಲಿದೆ.
ಇದಕ್ಕಾಗಿ ಪ್ರಾಂತ ಮಟ್ಟದಲ್ಲಿ ಭಾಷಣಕಾರರ ಕಾರ್ಯಾಗಾರಗಳನ್ನು ಆಯೋಜಿಸುವ ಯೋಜನೆಯೂ ಇದೆ. ಇದರ ಜೊತೆಗೆ ಸಣ್ಣ ಸಣ್ಣ ಸಭೆಗಳನ್ನು ನಡೆಸಿ, ಶೇಕಡಾ ನೂರರಷ್ಟು ಮತದಾನಕ್ಕೆ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
_
ಹಿಂದೂಸ್ತಾನ್ ಸಮಾಚಾರ್ / Rakesh.M.B.