

ನವದೆಹಲಿ, 02 ಅಕ್ಟೋಬರ್ (ಹಿ.ಸ.):
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಆಮ್ ಆದ್ಮಿ ಪಕ್ಷ ಹಾಗೂ ಕೆಲವು ವಿದ್ಯಾರ್ಥಿ ಸಂಘಟನೆಗಳು ಜಂತರ್‌ಮಂತರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ರೈಲು ನಿಗಮವು 11 ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಿದೆ.
ಜಂತರ್‌ಮಂತರ್ ಸಮೀಪದ ಪಟೇಲ್ ಚೌಕ್, ರಾಜೀವ್ ಚೌಕ್ ಹಾಗೂ ಕೇಂದ್ರ ಸಚಿವಾಲಯ ಸೇರಿದಂತೆ ಜನಪಥ್, ಸೇವಾ ತೀರ್ಥ, ಮಂಡಿ ಹೌಸ್, ಲೋಕ ಕಲ್ಯಾಣ ಮಾರ್ಗ, ಐಎನ್‌ಎ, ಚಾವಡಿ ಬಜಾರ್, ರಾಮಕೃಷ್ಣ ಆಶ್ರಮ ಮಾರ್ಗ ಮತ್ತು ನವದೆಹಲಿ ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ಹಾಗೂ ನಿರ್ಗಮನಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ದೆಹಲಿ ಮೆಟ್ರೋ ರೈಲು ನಿಗಮ ‘ಎಕ್ಸ್’ ಮೂಲಕ ತಿಳಿಸಿದೆ.
ಆದರೆ ರಾಜೀವ್ ಚೌಕ್, ಮಂಡಿ ಹೌಸ್, ನವದೆಹಲಿ ಮತ್ತು ಕೇಂದ್ರ ಸಚಿವಾಲಯ ಮೆಟ್ರೋ ನಿಲ್ದಾಣಗಳಲ್ಲಿ ರೈಲು ಬದಲಾಯಿಸುವ ಸೌಲಭ್ಯ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.
ಮತದಾರರ ಪಟ್ಟಿಯ ವಿಶೇಷ ಗಹನ ಪರಿಷ್ಕರಣೆ ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಂದ ಉತ್ತರದಾಯಿತ್ವಕ್ಕೆ ಆಗ್ರಹಿಸಿ ಕಾರ್ಯಕರ್ತರು, ರಾಜಕೀಯ ನಾಯಕರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳು ಜಂತರ್‌ಮಂತರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸರು, ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ ಹಾಗೂ ಗಲಭೆ ನಿಯಂತ್ರಣ ವಾಹನಗಳನ್ನು ನಿಯೋಜಿಸಲಾಗಿದೆ.
ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಹಾಗೂ ಕೆಲವು ವಿದ್ಯಾರ್ಥಿ ಸಂಘಟನೆಗಳು ಮತದಾರರ ಪಟ್ಟಿಯ ವಿಶೇಷ ಗಹನ ಪರಿಷ್ಕರಣೆ ಮತ್ತು ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಆರೋಪವನ್ನು ಮುಂದಿಟ್ಟುಕೊಂಡು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿವೆ. ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷದ ಜತೆಗೆ ಎಡಪಕ್ಷದ ವಿದ್ಯಾರ್ಥಿ ಘಟಕವಾದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್, ಕಾಂಗ್ರೆಸ್‌ನ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘ ಹಾಗೂ ಭಾರತೀಯ ಯುವ ಕಾಂಗ್ರೆಸ್ ಕೂಡ ಬೆಂಬಲ ನೀಡಿವೆ.
ಈ ನಡುವೆ ನವದೆಹಲಿ ಜಿಲ್ಲೆಯ ಉಪ ಪೊಲೀಸ್ ಆಯುಕ್ತ ಸಚಿನ್ ಶರ್ಮಾ ಮಾತನಾಡಿ, ನವದೆಹಲಿ ಜಿಲ್ಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163 ಜಾರಿಯಲ್ಲಿದೆ. ಯಾವುದೇ ರೀತಿಯ ಪ್ರತಿಭಟನೆ, ಮೆರವಣಿಗೆಗೆ ಅನುಮತಿ ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ.
ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ಭದ್ರತೆ ಹಾಗೂ ಸುರಕ್ಷತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಲ್ಲರೂ ಕಾನೂನು ಪಾಲಿಸುವಂತೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.