
ಗದಗ, 14 ಅಕ್ಟೋಬರ್ (ಹಿ.ಸ.):
ಕೃಷಿ ಹೊಂಡದ ಪೈಪ್ನಲ್ಲಿ ಸಿಲುಕಿಕೊಂಡು, ಆಹಾರ ಮತ್ತು ನೀರಿನ ಕೊರತೆಯಿಂದ ತೀವ್ರ ನಿತ್ರಾಣಗೊಂಡಿದ್ದ ಎಂಟು ವರ್ಷದ ಗಂಡು ಚಿರತೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವ ಘಟನೆ ಗದಗ ತಾಲೂಕಿನ ಸಿಂಗಟಾಯನಕೇರಿ ಗ್ರಾಮದಲ್ಲಿ ನಡೆದಿದೆ.
ನಿನ್ನೆ ಕೃಷಿ ಹೊಂಡದ ಪೈಪ್ನಲ್ಲಿ ಚಿರತೆ ಸಿಲುಕಿಕೊಂಡಿರುವುದು ಪತ್ತೆಯಾಗಿತ್ತು. ಪೈಪ್ನೊಳಗೆ ಸಿಲುಕಿದ್ದ ಚಿರತೆಯನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಿದ್ದರು.
ಆದರೆ, ದೀರ್ಘಕಾಲ ಪೈಪ್ ನೊಳಗೆ ಸಿಲುಕಿದ್ದ ಚಿರತೆ ಆಹಾರ ಮತ್ತು ನೀರಿನ ಕೊರತೆಯಿಂದ ತೀವ್ರವಾಗಿ ನಿತ್ರಾಣಗೊಂಡಿತ್ತು ಎನ್ನಲಾಗಿದೆ. ಹೀಗಾಗಿ ಚಿರತೆಯ ಜೀವ ಉಳಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಸಿಬ್ಬಂದಿ ಅಗತ್ಯ ಚಿಕಿತ್ಸೆ ಕೊಡಿಸಿ ಸತತ ಪ್ರಯತ್ನ ನಡೆಸಿದ್ದರು.
ಆದರೆ, ಅರಣ್ಯ ಇಲಾಖೆ ಸಿಬ್ಬಂದಿಯ ಪ್ರಯತ್ನಗಳ ನಡುವೆಯೂ ಚಿಕಿತ್ಸೆ ಫಲಕಾರಿಯಾಗದೆ ಎಂಟು ವರ್ಷದ ಗಂಡು ಚಿರತೆ ಕೊನೆಯುಸಿರೆಳೆದಿದೆ. ಚಿರತೆಯನ್ನು ಉಳಿಸಿಕೊಳ್ಳಲು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದು, ವನ್ಯಜೀವಿ ಪ್ರಿಯರಲ್ಲಿ ಬೇಸರ ಮೂಡಿಸಿದೆ.
ಮೃತ ಚಿರತೆಯ ಅಂತ್ಯಕ್ರಿಯೆಯನ್ನು ಅರಣ್ಯ ಇಲಾಖೆ ನಿಯಮಾನುಸಾರ ನೆರವೇರಿಸಲಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಣ್ಣವರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP