ರೈತರಿಗೆ ನ್ಯಾಯ ಸಿಗುವವರೆಗೆ ಸಕ್ಕರೆ ಸೇವಿಸುವುದಿಲ್ಲ: ದಿಂಗಾಲೇಶ್ವರ ಸ್ವಾಮೀಜಿ
ರೈತರ ಬೆಂಬಲಕ್ಕೆ ಮಠಾಧೀಶರು, ಸಾಹಿತಿಗಳು, ಚಿತ್ರನಟರು ಬೀದಿಗಿಳಿಯಲಿ; ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ
ದಿಂಗಾಲೇಶ್ವರ ಸ್ವಾಮೀಜಿ ಫೈಲ್ ಪೋಟೋ


ಹುಬ್ಬಳ್ಳಿ, 14 ಅಕ್ಟೋಬರ್ (ಹಿ.ಸ.):

ರೈತರಿಗೆ ನ್ಯಾಯ ದೊರೆಯುವವರೆಗೆ ಸಕ್ಕರೆ ಸೇವಿಸುವುದಿಲ್ಲ ಎಂದು ಗದಗ ಜಿಲ್ಲೆಯ ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಘೋಷಿಸಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರಗಳು ಅವರ ಪಾಲಿಗೆ ಶಾಪವಾಗುತ್ತಿವೆ. ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡಲು ಸಾಧ್ಯವಾಗದ ಸರ್ಕಾರಗಳು ಅಧಿಕಾರದಲ್ಲಿ ಮುಂದುವರಿಯಲು ಯೋಗ್ಯವಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲದ ಸಂಕಷ್ಟದ ನಡುವೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತರು ಬೀದಿಗಿಳಿದು ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಉರಿಬಿಸಿಲಿನಲ್ಲಿ ರಸ್ತೆಯ ಮೇಲೆ ಕುಳಿತು, ಕುಟುಂಬದವರನ್ನು ಹಾಗೂ ಜಾನುವಾರುಗಳನ್ನು ಮನೆಯಲ್ಲಿ ಬಿಟ್ಟು ರಾತ್ರಿಯನ್ನು ರಸ್ತೆಯಲ್ಲೇ ಕಳೆಯುತ್ತಿರುವ ರೈತರ ಸ್ಥಿತಿ ನಾಗರಿಕ ಸಮಾಜ ತಲೆತಗ್ಗಿಸುವಂತಿದೆ ಎಂದು ಹೇಳಿದರು.

ಭಾರತ ಕೃಷಿಪ್ರಧಾನ ದೇಶ. ರೈತ ದೇಶದ ಬೆನ್ನೆಲುಬು ಎಂದು ಎಲ್ಲ ಪಕ್ಷಗಳ ನಾಯಕರು ಹೇಳುತ್ತಾರೆ. ದೇಶದ ಅಸ್ತಿತ್ವವೇ ರೈತನ ಮೇಲೆ ಅವಲಂಬಿತವಾಗಿರುವಾಗ, ರೈತರು ಇಂತಹ ಸಂಕಷ್ಟ ಎದುರಿಸಲು ಯಾರು ಕಾರಣ ಎಂಬುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಕೈಗಾರಿಕೆಗಳಿಗೆ ಬೆಲೆ ನಿಗದಿ ಅಧಿಕಾರ, ರೈತನಿಗೆ ಏಕಿಲ್ಲ?

ಪೆಟ್ರೋಲ್ ಬೆಲೆ ಏರಿಕೆ ಮಾಡುವಾಗ ಸರ್ಕಾರಗಳು ಯಾವುದೇ ವಿಳಂಬವಿಲ್ಲದೆ ನಿರ್ಧಾರ ಕೈಗೊಳ್ಳುತ್ತವೆ. ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ ಎಂಬ ಕಾರಣ ನೀಡುತ್ತವೆ. ಆದರೆ ರೈತರು ಬಳಸುವ ಗೊಬ್ಬರ, ಕೃಷಿ ಕಾರ್ಮಿಕರ ಕೂಲಿ, ವಿದ್ಯುತ್ ಮತ್ತು ನೀರಿನ ವೆಚ್ಚ ಹೆಚ್ಚಾದಾಗ ಅವರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಎಲ್ಲ ಕಂಪನಿಗಳು ತಾವು ತಯಾರಿಸುವ ವಸ್ತುಗಳ ಬೆಲೆಯನ್ನು ತಾವೇ ನಿರ್ಧರಿಸುತ್ತವೆ. ಆದರೆ ರೈತರು ತಮ್ಮ ಬೆಳೆಗಳಿಗೆ ಬೆಲೆ ನಿಗದಿಪಡಿಸುವ ಅಧಿಕಾರವನ್ನೂ ಹೊಂದಿಲ್ಲ. ಇದು ಅನ್ಯಾಯದ ಪರಮಾವಧಿ ಎಂದು ಟೀಕಿಸಿದರು.

ಕಬ್ಬು ಕಟಾವು ವಿಳಂಬವಾದರೆ ಪ್ರತಿದಿನವೂ ಅದರ ತೂಕದಲ್ಲಿ ವ್ಯತ್ಯಾಸವಾಗುತ್ತದೆ. ಕಬ್ಬಿನಲ್ಲಿರುವ ನೀರಿನ ಅಂಶ ಕಡಿಮೆಯಾಗಿ ತೂಕ ಇಳಿಕೆಯಾಗುವುದರಿಂದ ರೈತರಿಗೆ ನಷ್ಟವಾಗುತ್ತದೆ. ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಆಡಳಿತ ನಡೆಸುವವರಿಗೆ ಕಬ್ಬು ಬೆಳೆಗಾರರ ಈ ನೋವು ಅರ್ಥವಾಗುವುದಿಲ್ಲ ಎಂದು ಹೇಳಿದರು.

ತಾವು ಕೂಡ ಮಠದ ಜಮೀನಿನಲ್ಲಿ ಕಬ್ಬು ಬೆಳೆದಿದ್ದು, ಸುಮಾರು 15 ವರ್ಷಗಳ ಕಾಲ ಕಬ್ಬು ಕೃಷಿಯ ಅನುಭವ ಹೊಂದಿದ್ದೇನೆ. ಹೀಗಾಗಿ ಕಬ್ಬು ಬೆಳೆಗಾರರು ಎದುರಿಸುವ ಸಮಸ್ಯೆಗಳು ಮತ್ತು ಅವರ ನೋವು ತಮಗೆ ತಿಳಿದಿದೆ ಎಂದರು.

ರೈತರನ್ನು ದೆಹಲಿಗೆ ಕರೆಸಿ ಅವಮಾನಿಸಲಾಗಿದೆ

ಹುಬ್ಬಳ್ಳಿಯಲ್ಲಿ ರೈತರು ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಿದಾಗ, ಸರ್ಕಾರಗಳು ರೈತರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿವೆ ಎಂದು ಆರೋಪಿಸಿದ ದಿಂಗಾಲೇಶ್ವರ ಸ್ವಾಮೀಜಿ, ಮಾನವೀಯತೆಯ ದೃಷ್ಟಿಯಿಂದ ರೈತರು ಸಮಯ ನೀಡಿದರೂ ಅವರನ್ನು ದೆಹಲಿಗೆ ಕರೆಸಲಾಯಿತು. ಆದರೆ ಅಲ್ಲಿ ರೈತರ ಸಮಸ್ಯೆಗಳಿಗೆ ನ್ಯಾಯ ಒದಗಿಸುವ ಬದಲು ಅವಮಾನಕರ ರೀತಿಯಲ್ಲಿ ವಾಪಸ್ ಕಳುಹಿಸಲಾಗಿದೆ ಎಂದು ದೂರಿದರು.

ರಾಜ್ಯದ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಮಂಡಿಸಿ ಪರಿಹಾರ ದೊರಕಿಸಿಕೊಡಬೇಕಾದ ಸಂಸದರು ರೈತರನ್ನು ದೆಹಲಿಗೆ ಕರೆಸಿಕೊಂಡು ಅವರ ಅಹವಾಲು ಆಲಿಸುವ ನಾಟಕವಾಡಿದರೆ ಹೇಗೆ? ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ ಎಂದು ಹೇಳಿದರು.

ರೈತರ ಸಮಸ್ಯೆಗಳ ಅಧ್ಯಯನಕ್ಕಾಗಿ ಮತ್ತೊಂದು ಸಮಿತಿ ರಚಿಸಿ ವರದಿ ಪಡೆಯಬೇಕೆಂಬ ಅಭಿಪ್ರಾಯ ವ್ಯಕ್ತವಾಗಿರುವುದನ್ನು ಪ್ರಶ್ನಿಸಿದ ಅವರು, ಈಗಾಗಲೇ ಸರ್ಕಾರ ನೇಮಿಸಿದ್ದ ಎಂ.ಎಸ್. ಸ್ವಾಮಿನಾಥನ್ ಆಯೋಗವು 2004ರಿಂದ 2006ರವರೆಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ಆ ವರದಿಯ ಶಿಫಾರಸುಗಳನ್ನು ಜಾರಿಗೊಳಿಸುವ ಬದಲು ಮತ್ತೊಂದು ಸಮಿತಿ ರಚಿಸುವ ಮೂಲಕ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಪ್ರಧಾನಿ ಧರ್ಮರಾಜನ ನೀತಿ ಅನುಸರಿಸಲಿ

ರೈತರ ಸಮಸ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದು ವಿಷಾದನೀಯ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಪ್ರಧಾನಿ ಧೃತರಾಷ್ಟ್ರನಂತೆ ಕಣ್ಣುಮುಚ್ಚಿ ಕುಳಿತುಕೊಳ್ಳದೆ ಧರ್ಮರಾಜನ ನೀತಿಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ದೇಶದ ಐದು ಕೋಟಿ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಧಾನಿ ಅವರಿಗೆ ಆಗ್ರಹಿಸಿದ ಅವರು, ರೈತರ ಹಿತಾಸಕ್ತಿಯನ್ನು ಕಾಪಾಡುವ ಮೂಲಕವೇ ನಾಯಕರು ತಮ್ಮ ಆದರ್ಶವನ್ನು ಸಾಬೀತುಪಡಿಸಬೇಕು ಎಂದರು.

ರೈತರ ಪರವಾಗಿ ಮಠಾಧೀಶರು ಬೀದಿಗಿಳಿಯಲಿ

ರೈತರ ಹೋರಾಟಕ್ಕೆ ಕರ್ನಾಟಕ ಮಾತ್ರವಲ್ಲದೆ ದೇಶದ ಎಲ್ಲ ಮಠಾಧೀಶರು, ಕಾವಿಧಾರಿಗಳು, ಬಿಳಿ ವಸ್ತ್ರಧಾರಿಗಳು, ಸಾಧುಗಳು, ಸಂತರು ಮತ್ತು ಶರಣರು ಬೆಂಬಲ ನೀಡಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಮನವಿ ಮಾಡಿದರು.

ಮಠಗಳು ರೈತರು ನೀಡಿದ ದಾನದಿಂದ ಬೆಳೆದು ಬಂದಿವೆ. ಮಠಾಧೀಶರು ಸೇವಿಸುವ ಅನ್ನ ಮತ್ತು ಅವರು ವಾಸಿಸುವ ಮಠಗಳು ರೈತರ ಪರಿಶ್ರಮದ ಫಲವಾಗಿವೆ. ಹೀಗಾಗಿ ರೈತರು ಸಂಕಷ್ಟದಲ್ಲಿರುವಾಗ ಮಠಾಧೀಶರು ಮಠಗಳನ್ನು ಬಿಟ್ಟು ಹೊರಬಂದು ಅವರೊಂದಿಗೆ ನಿಲ್ಲಬೇಕು ಎಂದು ಕರೆ ನೀಡಿದರು.

ಸಾಹಿತಿಗಳು ರೈತರ ಪರವಾಗಿ ಬರೆಯಬೇಕು. ಚಿತ್ರನಟರು ಮತ್ತು ನಟಿಯರು ರೈತರ ಹೋರಾಟಕ್ಕೆ ಬೆಂಬಲವಾಗಿ ಬೀದಿಗಿಳಿಯಬೇಕು. ಮಾಧ್ಯಮಗಳು ರೈತರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಬೇಕು. ಸಮಾಜದ ಎಲ್ಲ ಪ್ರಜ್ಞಾವಂತರು ಸರ್ಕಾರಗಳ ಮೇಲೆ ಒತ್ತಡ ಹೇರಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದರು.

ರೈತರ ಪರವಾಗಿ ನಿಲ್ಲುವುದು ಕೇವಲ ಒಂದು ವರ್ಗದ ಜವಾಬ್ದಾರಿಯಲ್ಲ. ರೈತರು ಬೆಳೆದ ಅನ್ನವನ್ನು ಸೇವಿಸುವ ಪ್ರತಿಯೊಬ್ಬರೂ ಅವರ ಸಂಕಷ್ಟವನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ರೈತರು ಆತ್ಮಹತ್ಯೆಗೆ ಮುಂದಾಗಬಾರದು

ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿದ ದಿಂಗಾಲೇಶ್ವರ ಸ್ವಾಮೀಜಿ, ರೈತರ ಬೇಡಿಕೆಗಳು ನ್ಯಾಯಯುತವಾಗಿದ್ದು, ಅವುಗಳನ್ನು ಈಡೇರಿಸುವಂತೆ ಒಗ್ಗಟ್ಟಿನಿಂದ ಹೋರಾಡಬೇಕು ಎಂದರು.

ರೈತರ ಹೋರಾಟದ ವಿರುದ್ಧ ಅಪಪ್ರಚಾರ ಮಾಡುವವರು ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕು. ರೈತರ ಸಮಸ್ಯೆಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು. ರೈತರ ವಿಚಾರದಲ್ಲಿ ರಾಜಕಾರಣ ಮಾಡುವುದು ತಾಯಿಗೆ ದ್ರೋಹ ಬಗೆದಂತೆ ಎಂದು ಹೇಳಿದರು.

ರೈತರ ಪರವಾಗಿ ಮಾತನಾಡುವವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ರೈತರು ಯಾರ ಆಮಿಷಕ್ಕೂ ಬಲಿಯಾಗದೆ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ಕರೆ ನೀಡಿದರು.

ಕಬ್ಬು ಬೆಲೆ ನಿಗದಿಪಡಿಸಿ, ಇಲ್ಲವೇ ರಾಜೀನಾಮೆ ನೀಡಿ

ಕೇಂದ್ರ ಸರ್ಕಾರದಲ್ಲಿ ಪ್ರಭಾವ ಹೊಂದಿರುವ ರಾಜ್ಯದ ಸಚಿವರು ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬೇಕು. ರೈತರಿಗೆ ನ್ಯಾಯಯುತ ಬೆಲೆ ಕೊಡಿಸಲು ಸಾಧ್ಯವಾಗದಿದ್ದರೆ, ತಮ್ಮ ಅಸಹಾಯಕತೆಯನ್ನು ಒಪ್ಪಿಕೊಂಡು ರಾಜೀನಾಮೆ ನೀಡಿ ಮನೆಗೆ ಮರಳಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದರು.

ರೈತರ ಸಂಕಷ್ಟವನ್ನು ಕಡೆಗಣಿಸುವ ಜನಪ್ರತಿನಿಧಿಗಳು ಹುಬ್ಬಳ್ಳಿ ಭಾಗಕ್ಕೆ ಕಾಲಿಡಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಸಿದರು.

ತಾವು ಸುಮಾರು 20 ವರ್ಷಗಳ ಹಿಂದೆ 'ಬಾರ್ಕೋಲ್ ಕ್ರಾಂತಿ' ಹೆಸರಿನಲ್ಲಿ ರೈತರ ಪರವಾಗಿ ಹೋರಾಟ ನಡೆಸಿದ್ದನ್ನು ಸ್ಮರಿಸಿದ ಅವರು, ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಕಬ್ಬು ಬೆಳೆಗಾರರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಿದ್ದೆವು. ರೈತರಿಗೆ ನ್ಯಾಯ ದೊರಕಿಸುವುದಾಗಿ ಭರವಸೆ ನೀಡಿದರೂ, ಇತ್ತೀಚಿನ ಬೆಳವಣಿಗೆಗಳಲ್ಲಿ ಅವರಿಗೆ ನಿರಾಸೆಯಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ರೈತರ ಪರವಾಗಿ ಬೀದಿಗಿಳಿಯಬೇಕಾಗಿದೆ ಎಂದರು.

ರೈತರಿಗೆ ನ್ಯಾಯ ದೊರೆಯುವವರೆಗೆ ಸಕ್ಕರೆ ಸೇವಿಸದಿರಲು ನಿರ್ಧರಿಸಿರುವುದಾಗಿ ಪುನರುಚ್ಚರಿಸಿದ ದಿಂಗಾಲೇಶ್ವರ ಸ್ವಾಮೀಜಿ, ರೈತರ ಹಿತಾಸಕ್ತಿ ಕಾಪಾಡಲು ತಾವು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳುವುದಾಗಿ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande