
ಕೋಲಾರ, 14 ಅಕ್ಟೋಬರ್ (ಹಿ.ಸ):
ಇ-ಸ್ವತ್ತು ಮಾಡಿಕೊಡಲು ಲಂಚ ಸ್ವೀಕರಿಸಿದ್ದ ಸರ್ಕಾರಿ ಅಧಿಕಾರಿ ರಾಜೇಶ್ ಹೆಚ್.ಆರ್ ಅವರಿಗೆ ೪ ವರ್ಷ ಜೈಲು ಶಿಕ್ಷೆ ಹಾಗೂ ೧ ಲಕ್ಷ ರೂಪಾಯಿ ದಂಡ ವಿಧಿಸಿ ಕೋಲಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ವಾಸದ ಮನೆ ಮತ್ತು ಖಾಲಿ ಜಾಗಕ್ಕೆ ಇ-ಸ್ವತ್ತು ಮಾಡಿಕೊಡಲು ದೂರುದಾರ ರಾಮಯ್ಯ ಎಂಬುವವರಿAದ ಲಂಚದ ಬೇಡಿಕೆಯಿಟ್ಟಿದ್ದ ಕೋಲಾರ ತಾಲೂಕು ಕಚೇರಿಯ ಭೂಮಾಪನಾ ಶಾಖೆಯ ದ್ವಿತೀಯ ದರ್ಜೆ ಭೂಮಾಪಕ ರಾಜೇಶ್ ಹೆಚ್.ಆರ್, ಲಂಚದ ಹಣ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
ಸ್ಕೆಚ್ ನೀಡಲು ಹಾಗೂ ನಾಡಕಚೇರಿಗೆ ತಮ್ಮ ಹೆಬ್ಬೆಟ್ಟಿನ ಬೆರಳಚ್ಚು ನೀಡದೇ ವಿಳಂಬ ಧೋರಣೆ ಅನುಸರಿಸಿದ್ದ ರಾಜೇಶ್, ಕೆಲಸ ಮಾಡಿಕೊಡಲು ೩,೦೦೦ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, ಸೆಪ್ಟೆಂಬರ್ ೧೫, ೨೦೧೭ ರಂದು ೨,೫೦೦ ರೂಪಾಯಿಗಳನ್ನು ಸ್ವೀಕರಿಸುವಾಗ ಕೋಲಾರದ ಭ್ರಷ್ಟಾಚಾರ ನಿಗ್ರಹ ದಳದ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದರು.
ಘಟನೆಯ ಕುರಿತು ಸುದೀರ್ಘ ತನಿಖೆ ನಡೆಸಿದ್ದ ಪೊಲೀಸ್ ಇನ್ಸ್ಪೆಕ್ಟರ್ ರಂಗಸ್ವಾಮಯ್ಯ ವೈ.ಆರ್ ಅವರು ಆಗಸ್ಟ್ ೨೫, ೨೦೧೮ ರಂದು ಕೋಲಾರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಕುಮಾರ್ ಎಂ. ಆನಂದಶೆಟ್ಟಿ ಅವರು, ಆರೋಪಿ ಮೇಲಿನ ಎಲ್ಲಾ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಕ್ಟೋಬರ್ ೧೨, ೨೦೨೬ ರಂದು ಈ ಶಿಕ್ಷೆ ಪ್ರಕಟಿಸಿದ್ದಾರೆ.
ಪ್ರಸ್ತುತ ಆನೇಕಲ್ ತಾಲೂಕಿನಲ್ಲಿ ದ್ವಿತೀಯ ದರ್ಜೆ ಭೂಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜೇಶ್ಗೆ ಈ ಶಿಕ್ಷೆ ವಿಧಿಸಲಾಗಿದೆಯೆಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್