
ನವದೆಹಲಿ, 13 ಅಕ್ಟೋಬರ್ (ಹಿ.ಸ.):
ಈಶಾನ್ಯ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸಂಪ್ರದಾಯಗಳು ಹಾಗೂ ಅಭಿವೃದ್ಧಿಯ ಸಾಧ್ಯತೆಗಳನ್ನು ಅರಿಯುವಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮಹತ್ವದ್ದಾಗಿದೆ ಎಂದು ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಇಂತಹ ಸಂವಾದಗಳು ಯುವಜನರಿಗೆ ಈಶಾನ್ಯ ಭಾರತದ ವೈವಿಧ್ಯತೆಯನ್ನು ಹತ್ತಿರದಿಂದ ತಿಳಿದುಕೊಳ್ಳಲು ಅವಕಾಶ ಕಲ್ಪಿಸುತ್ತವೆ. ಅಲ್ಲದೆ, ಸಾಂಸ್ಕೃತಿಕ ಸಂಬಂಧಗಳು, ಪರಸ್ಪರ ತಿಳುವಳಿಕೆ ಹಾಗೂ ರಾಷ್ಟ್ರೀಯ ಏಕತೆಯನ್ನು ಬಲಪಡಿಸಲು ನೆರವಾಗುತ್ತವೆ ಎಂದು ಅವರು ತಿಳಿಸಿದ್ದಾರೆ.
ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವಾಲಯದ ಪ್ರಕಾರ, ಮಿಜೋರಾಂ ರಾಜ್ಯದ ಎರಡು ದಿನಗಳ ಪ್ರವಾಸದ ಸಂದರ್ಭದಲ್ಲಿ ಸಿಂಧಿಯಾ ಅವರು ಮಿಜೋರಾಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸಚಿವಾಲಯದ ‘ಅಷ್ಟಲಕ್ಷ್ಮಿ ದರ್ಶನ’ ಕಾರ್ಯಕ್ರಮದಡಿ ಈಶಾನ್ಯ ಭಾರತಕ್ಕೆ ಭೇಟಿ ನೀಡಿದ್ದ ಗೋವಾ ಮತ್ತು ಚಂಡೀಗಢದ ವಿದ್ಯಾರ್ಥಿಗಳನ್ನೂ ಭೇಟಿಯಾಗಿ, ಅವರ ಅನುಭವಗಳು ಹಾಗೂ ಅಭಿಪ್ರಾಯಗಳ ಕುರಿತು ಚರ್ಚಿಸಿದರು.
ಕಳೆದ ಒಂದು ವರ್ಷದಲ್ಲಿ ಈ ಕಾರ್ಯಕ್ರಮದಡಿ 590ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಈಶಾನ್ಯ ಭಾರತ ಮತ್ತು ದೇಶದ ಇತರ ಭಾಗಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುವುದು ಹಾಗೂ ಯುವಜನರಿಗೆ ಈ ಪ್ರದೇಶದ ಸಂಪ್ರದಾಯಗಳು, ಸಮುದಾಯಗಳು ಮತ್ತು ಅಭಿವೃದ್ಧಿಯ ಅವಕಾಶಗಳ ಪರಿಚಯ ಮಾಡಿಕೊಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಗುರಿಗೆ ಈ ಉಪಕ್ರಮ ಪೂರಕವಾಗಿದೆ ಎಂದು ಸಿಂಧಿಯಾ ಹೇಳಿದರು. ಯುವಜನರ ಭಾಗವಹಿಸುವಿಕೆಯನ್ನು ಹೆಚ್ಚಿಸಲು, ದೇಶದ ವೈವಿಧ್ಯತೆಯನ್ನು ಅರಿಯಲು ಹಾಗೂ ಭಾರತದ ಅಭಿವೃದ್ಧಿಯ ಪಯಣದಲ್ಲಿ ಈಶಾನ್ಯ ಭಾರತದ ಪಾತ್ರವನ್ನು ಮತ್ತಷ್ಟು ಬಲಪಡಿಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.