
ನವದೆಹಲಿ, 13 ಅಕ್ಟೋಬರ್ (ಹಿ.ಸ.):
ಜಗತ್ತು ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತ ವಿಭಿನ್ನ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದ್ದು, ಇತರರನ್ನು ಸಬಲಗೊಳಿಸುವುದಕ್ಕೆ ಆದ್ಯತೆ ನೀಡುತ್ತಿದೆ. ಭಾರತ ಇಂದು ಜಾಗತಿಕ ಒಳಿತಿನ ಮತ್ತು ವಿಶ್ವಾಸದ ಸಂಕೇತವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಂಗಳವಾರ ನಡೆದ ಬ್ಲೂಮ್‌ಬರ್ಗ್ ನ್ಯೂ ಎಕನಾಮಿಕ್ ಫೋರಂನಲ್ಲಿ ಮಾತನಾಡಿದ ಅವರು, ಭಾರತದ ಪ್ರಜಾಸತ್ತಾತ್ಮಕ ಚರ್ಚೆಗಳು, ಡಿಜಿಟಲ್ ಒಳಗೊಳ್ಳುವಿಕೆ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸುವ ವಿಧಾನದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ವೇದಿಕೆಯಲ್ಲಿ ತಂತ್ರಜ್ಞಾನ, ಇಂಧನ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದಕ್ಕೆ ಬ್ಲೂಮ್‌ಬರ್ಗ್ ಮತ್ತು ಅದರ ತಂಡವನ್ನು ಅಭಿನಂದಿಸಿದರು.
ಜಾಗತಿಕ ಸವಾಲುಗಳ ಕುರಿತು ಮಾತನಾಡಿದ ಮೋದಿ, ಜಗತ್ತನ್ನು ಪರಸ್ಪರ ಬೆಸೆಯುತ್ತಿದ್ದ ಅಂಶಗಳನ್ನೇ ಈಗ ಪ್ರಭಾವ ಬೀರುವ ಮತ್ತು ಒತ್ತಡ ಹೇರುವ ಅಸ್ತ್ರಗಳಾಗಿ ಬಳಸಲಾಗುತ್ತಿದೆ ಎಂದು ಹೇಳಿದರು. ಪೂರೈಕೆ ಸರಪಳಿ, ಇಂಧನ, ಖನಿಜಗಳು ಮತ್ತು ತಂತ್ರಜ್ಞಾನಗಳನ್ನು ಪ್ರಾಬಲ್ಯ ಸಾಧಿಸುವ ಸಾಧನಗಳನ್ನಾಗಿ ಬಳಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿಶ್ವಾಸಕ್ಕೆ ಸಂಬಂಧಿಸಿದ ಜಾಗತಿಕ ಸವಾಲುಗಳಿಗೆ ಭಾರತ ಪರಿಹಾರಗಳನ್ನು ಮುಂದಿಡುತ್ತಿದೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ, ವಿಪತ್ತು ನಿರೋಧಕ ಮೂಲಸೌಕರ್ಯಗಳ ಒಕ್ಕೂಟ, ಬಿಗ್ ಕ್ಯಾಟ್ ಅಲಯನ್ಸ್, ಜಾಗತಿಕ ಜೈವಿಕ ಇಂಧನ ಮೈತ್ರಿಕೂಟ, ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಮತ್ತು ಮಿಷನ್ ಲೈಫ್ ಸೇರಿದಂತೆ ಹಲವು ಉಪಕ್ರಮಗಳನ್ನು ಭಾರತ ಜಗತ್ತಿನ ಮುಂದಿಟ್ಟಿದೆ. ಈ ಪ್ರಯತ್ನಗಳಿಂದ ವ್ಯಾಪಕ ಪ್ರಮಾಣದಲ್ಲಿ ಜನರಿಗೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.
ದತ್ತಾಂಶ, ಜ್ಞಾನ ಮತ್ತು ನಾವೀನ್ಯತೆಗಳು ಇಂದು ಶಕ್ತಿಯ ಪ್ರಮುಖ ಮೂಲಗಳಾಗಿವೆ. ಅವುಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದು ಮುಖ್ಯ. ಶಕ್ತಿಯನ್ನು ಬಳಸಿಕೊಂಡು ಇತರರನ್ನು ಸಬಲಗೊಳಿಸುವ ಚಿಂತನೆಯೇ ಇದರ ಹಿಂದಿನ ಉದ್ದೇಶವಾಗಿದೆ. ಇದು ಭಾರತೀಯ ಪರಂಪರೆಯ ಭಾಗವಾಗಿದ್ದು, ಆಡಳಿತ ಮತ್ತು ಕಾರ್ಯಸಂಸ್ಕೃತಿಯಲ್ಲೂ ಈ ತತ್ವವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಪ್ರಧಾನಿ ವಿವರಿಸಿದರು.
ಭಾರತದಲ್ಲಿ 100ಕ್ಕೂ ಹೆಚ್ಚು ಭಾಷೆಗಳು, 80 ಸಾವಿರಕ್ಕೂ ಹೆಚ್ಚು ಪತ್ರಿಕೆಗಳು ಮತ್ತು ಇತರ ಪ್ರಕಟಣೆಗಳು ಹಾಗೂ ಒಂದು ಸಾವಿರಕ್ಕೂ ಹೆಚ್ಚು ಉಪಗ್ರಹ ದೂರದರ್ಶನ ವಾಹಿನಿಗಳಿವೆ. ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ತಲಾ 50 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿವೆ. ಪ್ರಜಾಸತ್ತಾತ್ಮಕ ಚರ್ಚೆಗಳಲ್ಲಿ ಡಿಜಿಟಲ್ ಮಾಧ್ಯಮಗಳ ಪಾತ್ರ ನಿರಂತರವಾಗಿ ಹೆಚ್ಚುತ್ತಿದೆ ಎಂದು ಮೋದಿ ಹೇಳಿದರು.
ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸಿನೋಡುವಂತೆ ವಿದೇಶಿ ಅತಿಥಿಗಳಿಗೆ ಪ್ರಧಾನಿ ಆಹ್ವಾನ ನೀಡಿದರು. ತಂತ್ರಜ್ಞಾನವನ್ನು ಎಲ್ಲರಿಗೂ ತಲುಪಿಸುವ ಶಕ್ತಿಗೆ ಇದು ಉತ್ತಮ ಉದಾಹರಣೆಯಾಗಿದೆ. ಬೀದಿಬದಿಯಲ್ಲಿ ವ್ಯಾಪಾರ ಮಾಡುವವರಿಂದ ಹಿಡಿದು ದುಬಾರಿ ಮಳಿಗೆಗಳನ್ನು ನಡೆಸುವವರವರೆಗೆ ಎಲ್ಲರನ್ನೂ ಡಿಜಿಟಲ್ ಪಾವತಿ ವ್ಯವಸ್ಥೆ ಸಂಪರ್ಕಿಸುತ್ತದೆ ಎಂದು ತಿಳಿಸಿದರು.
ದೇಶದಲ್ಲಿ ನಾವೀನ್ಯತೆಗೆ ಹೆಚ್ಚುತ್ತಿರುವ ಅವಕಾಶಗಳನ್ನು ಉಲ್ಲೇಖಿಸಿದ ಅವರು, 2014ಕ್ಕೂ ಮೊದಲು ಭಾರತದಲ್ಲಿ ಕೆಲವೇ ನವೋದ್ಯಮಗಳಿದ್ದವು. ಈಗ ಅವುಗಳ ಸಂಖ್ಯೆ ಎರಡೂವರೆ ಲಕ್ಷಕ್ಕೂ ಅಧಿಕವಾಗಿದೆ. ದೇಶದಲ್ಲಿ ಪ್ರತಿಭೆಗಳು ಹೆಚ್ಚಾಗಿ ಹೊರಹೊಮ್ಮುತ್ತಿದ್ದು, ಹೊಸ ಆವಿಷ್ಕಾರಗಳಿಗೆ ಅವಕಾಶಗಳು ವಿಸ್ತರಿಸುತ್ತಿವೆ ಎಂದರು.
ಭಾರತದ ವಿದೇಶಿ ವಿನಿಮಯ ಮೀಸಲು 700 ಶತಕೋಟಿ ಡಾಲರ್‌ಗೆ ತಲುಪಿದೆ ಮತ್ತು ದೇಶದ ಬ್ಯಾಂಕಿಂಗ್ ವ್ಯವಸ್ಥೆ ಸದೃಢವಾಗಿದೆ ಎಂದು ಪ್ರಧಾನಿ ತಿಳಿಸಿದರು. ಭಾರತದಲ್ಲಿ ಸುಧಾರಣಾ ಪ್ರಕ್ರಿಯೆ ವೇಗವಾಗಿ ಮುಂದುವರಿದಿದ್ದು, ಈ ಸುಧಾರಣೆಗಳನ್ನು ಯಾವುದೇ ಒತ್ತಡಕ್ಕೆ ಮಣಿದು ಕೈಗೊಳ್ಳುತ್ತಿಲ್ಲ. ಬದಲಾಗಿ, ದೃಢವಾದ ನಂಬಿಕೆ ಮತ್ತು ಸಂಕಲ್ಪದೊಂದಿಗೆ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.