ಮಂಡ್ಯದಲ್ಲಿ ಅಂಬರೀಷ್ ಪುತ್ಥಳಿ ನಿರ್ಮಾಣಕ್ಕೆ ಆಗ್ರಹ: ಅಭಿಮಾನಿಗಳಿಂದ ಹೆದ್ದಾರಿ ತಡೆದು ಪ್ರತಿಭಟನೆ
ಮಂಡ್ಯ, 12 ಅಕ್ಟೋಬರ್ (ಹಿ.ಸ.): ಮಂಡ್ಯ ನಗರದಲ್ಲಿ ದಿವಂಗತ ನಟ ಹಾಗೂ ಮಾಜಿ ಕೇಂದ್ರ ಸಚಿವ ಅಂಬರೀಷ್ ಅವರ ಆಳೆತ್ತರದ ಪುತ್ಥಳಿ ನಿರ್ಮಿಸಬೇಕು ಎಂದು ಆಗ್ರಹಿಸಿರುವ ಅಭಿಮಾನಿಗಳು, ಇದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ತಾವೇ ಭರಿಸಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಅಂಬರೀಷ್ ಅವರು ಇಂದಿಗೂ ಜನರ ಹೃದ
mandya-ambareesh-fans-protest-demand-statue-installation


ಮಂಡ್ಯ, 12 ಅಕ್ಟೋಬರ್ (ಹಿ.ಸ.):

ಮಂಡ್ಯ ನಗರದಲ್ಲಿ ದಿವಂಗತ ನಟ ಹಾಗೂ ಮಾಜಿ ಕೇಂದ್ರ ಸಚಿವ ಅಂಬರೀಷ್ ಅವರ ಆಳೆತ್ತರದ ಪುತ್ಥಳಿ ನಿರ್ಮಿಸಬೇಕು ಎಂದು ಆಗ್ರಹಿಸಿರುವ ಅಭಿಮಾನಿಗಳು, ಇದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ತಾವೇ ಭರಿಸಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.

ಅಂಬರೀಷ್ ಅವರು ಇಂದಿಗೂ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರ ವ್ಯಕ್ತಿತ್ವ, ಜನಪರ ಕಾಳಜಿ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಕರ್ತವ್ಯವಾಗಿದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.

ರಾಜಕೀಯದಲ್ಲಿ ಪಕ್ಷಾತೀತವಾಗಿ ಎಲ್ಲ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅಂಬರೀಷ್ ಅವರು, ಕಾವೇರಿ ಕೊಳ್ಳದ ರೈತರ ಹಿತಾಸಕ್ತಿ ಕಾಪಾಡಲು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದರು. ಮಂಡ್ಯ ಜಿಲ್ಲೆಗೆ ಅವರು ನೀಡಿದ ಕೊಡುಗೆಗಳು ಅಪಾರವಾಗಿದ್ದು, ಇಂತಹ ವ್ಯಕ್ತಿತ್ವದ ನಾಯಕನ ಪುತ್ಥಳಿ ನಗರದಲ್ಲಿ ಇಲ್ಲದಿರುವುದು ಅಭಿಮಾನಿಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದರು.

ಸರ್ಕಾರದ ಅನುದಾನ ಬೇಡ, ಸ್ಥಳಾವಕಾಶ ನೀಡಿ:

ಮಂಡ್ಯ ನಗರದಲ್ಲಿ ಅಂಬರೀಷ್ ಅವರ ಪುತ್ಥಳಿ ನಿರ್ಮಾಣಕ್ಕೆ ಅಭಿಮಾನಿಗಳೇ ಹಣ ಸಂಗ್ರಹಿಸಿ ಸಂಪೂರ್ಣ ವೆಚ್ಚ ಭರಿಸಲು ಸಿದ್ಧರಿದ್ದಾರೆ. ಇದಕ್ಕಾಗಿ ಸರ್ಕಾರದಿಂದ ಯಾವುದೇ ಅನುದಾನವನ್ನು ಕೇಳುತ್ತಿಲ್ಲ. ನಗರದಲ್ಲಿ ಸೂಕ್ತ ಸ್ಥಳಾವಕಾಶವನ್ನು ಮಾತ್ರ ಕಲ್ಪಿಸಿಕೊಡಬೇಕು ಎಂದು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಅಂಬರೀಷ್ ಅವರ ಸ್ಮರಣಾರ್ಥ ಪುತ್ಥಳಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಅವರ ಸಾಮಾಜಿಕ ಕಾಳಜಿ, ಜನಪರ ಸೇವೆ ಹಾಗೂ ಮಂಡ್ಯ ಜಿಲ್ಲೆಯೊಂದಿಗಿನ ನಂಟನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಅವಕಾಶ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande