ಬೆಂಗಳೂರಿನಲ್ಲಿ ಅ.20ರಿಂದ ಫಿಬಾ ಮಹಿಳಾ ಬಾಸ್ಕೆಟ್ ಬಾಲ್ ಲೀಗ್ ಏಷ್ಯಾ-2026
ಆರು ತಂಡಗಳ ನಡುವೆ ಪ್ರಶಸ್ತಿಗಾಗಿ ಪೈಪೋಟಿ; ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಾವಳಿ
fiba-womens-basketball-league-asia-2026-bengaluru-october-20


ಬೆಂಗಳೂರು, 12 ಅಕ್ಟೋಬರ್ (ಹಿ.ಸ.):

ಏಷ್ಯಾದ ಮಹಿಳಾ ಬಾಸ್ಕೆಟ್ಬಾಲ್ ಕ್ರೀಡಾಕೂಟಗಳಲ್ಲಿ ಪ್ರಮುಖವಾದ ಫಿಬಾ ಮಹಿಳಾ ಬಾಸ್ಕೆಟ್ಬಾಲ್ ಲೀಗ್ ಏಷ್ಯಾ-2026 ಪಂದ್ಯಾವಳಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ.

ಅಕ್ಟೋಬರ್ 20ರಿಂದ 25ರವರೆಗೆ ನಗರದ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದ್ದು, ಏಷ್ಯಾದ ಆರು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಫಿಬಾ ಏಷ್ಯಾ ಪ್ರಾದೇಶಿಕ ಕಚೇರಿ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಚೈನೀಸ್ ತೈಪೆ, ಭಾರತ ಹಾಗೂ ಫಿಲಿಪ್ಪೀನ್ಸ್ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಭಾರತವನ್ನು ಇಂಡಿಯನ್ ರೈಲ್ವೇಸ್ ತಂಡ ಪ್ರತಿನಿಧಿಸಲಿದೆ.

ಚೀನಾದ ಸಿಚುವಾನ್ ಯುವಾಂಡಾ ಮೀಲೆ, ಜಪಾನ್ನ ಡೆನ್ಸೊ ಐರಿಸ್, ದಕ್ಷಿಣ ಕೊರಿಯಾದ ಚೆಂಗ್ಜು ಕೆಬಿ ಸ್ಟಾರ್ಸ್, ಚೈನೀಸ್ ತೈಪೆಯ ಕ್ಯಾಥೆ ಲೈಫ್ ಟೈಗರ್ಸ್ ಹಾಗೂ ಫಿಲಿಪ್ಪೀನ್ಸ್ನ ಅಕಾರಿ ಸ್ಪಾರ್ಕ್ಸ್ ಉಳಿದ ತಂಡಗಳಾಗಿವೆ.

ಭಾರತದಲ್ಲಿ ಮೊದಲ ಬಾರಿಗೆ ಆಯೋಜನೆಫಿಬಾ ಮಹಿಳಾ ಬಾಸ್ಕೆಟ್ಬಾಲ್ ಲೀಗ್ ಏಷ್ಯಾ ಪಂದ್ಯಾವಳಿ ಭಾರತದಲ್ಲಿ ನಡೆಯುತ್ತಿರುವುದು ಇದೇ ಮೊದಲು.

ಏಷ್ಯಾ ಮಟ್ಟದ ಕ್ಲಬ್ ಬಾಸ್ಕೆಟ್ಬಾಲ್ ಪಂದ್ಯಾವಳಿಗೆ ಆತಿಥ್ಯ ವಹಿಸುತ್ತಿರುವ ಭಾರತದ ಮೊದಲ ನಗರ ಎಂಬ ಹೆಗ್ಗಳಿಕೆಗೂ ಬೆಂಗಳೂರು ಪಾತ್ರವಾಗಲಿದೆ.

ಈ ಹಿಂದೆ 2024ರಲ್ಲಿ ಚೀನಾದ ಚೆಂಗ್ಡು ಹಾಗೂ 2025ರಲ್ಲಿ ಡೊಂಗ್ಗುವಾನ್ ನಗರಗಳಲ್ಲಿ ಪಂದ್ಯಾವಳಿ ನಡೆದಿತ್ತು.

ಅಕ್ಟೋಬರ್ 20ರಿಂದ ಗುಂಪು ಹಂತದ ಪಂದ್ಯಗಳು

ಅಕ್ಟೋಬರ್ 20ರಿಂದ 22ರವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿವೆ. ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಅಕ್ಟೋಬರ್ 24ರಂದು ನಡೆಯುವ ಸೆಮಿಫೈನಲ್ಗೆ ಅರ್ಹತೆ ಪಡೆಯಲಿವೆ. ಅಕ್ಟೋಬರ್ 25ರಂದು ಫೈನಲ್ ಪಂದ್ಯ ನಡೆಯಲಿದ್ದು, ಅದಕ್ಕೂ ಮುನ್ನ ಮೂರನೇ ಸ್ಥಾನಕ್ಕಾಗಿ ಪಂದ್ಯ ಆಯೋಜಿಸಲಾಗಿದೆ.

ಈ ಪಂದ್ಯಾವಳಿಯು ಭಾರತದಲ್ಲಿ ಮಹಿಳಾ ಬಾಸ್ಕೆಟ್ಬಾಲ್ ಕ್ರೀಡೆಯ ಬೆಳವಣಿಗೆಗೆ ಉತ್ತೇಜನ ನೀಡುವುದರ ಜತೆಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಕ್ರೀಡಾ ಆತಿಥ್ಯ ಸಾಮರ್ಥ್ಯವನ್ನು ಮತ್ತಷ್ಟು ಪರಿಚಯಿಸಲಿದೆ ಎಂದು ನಿರೀಕ್ಷಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande