
ಬೆಂಗಳೂರು, 12 ಅಕ್ಟೋಬರ್ (ಹಿ.ಸ.):
ಡಾ. ರಾಮ ಮನೋಹರ ಲೋಹಿಯಾ ನಮ್ಮನ್ನಗಲಿ ಆರು ದಶಕಗಳು ಸಮೀಪಿಸುತ್ತಿದ್ದರೂ, ತಮ್ಮ ಬದುಕು ಮತ್ತು ಚಿಂತನೆಗಳ ಮೂಲಕ ಇಂದಿಗೂ ನಮ್ಮ ನಡುವೆ ಜೀವಂತವಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಮ ಮನೋಹರ ಲೋಹಿಯಾ ಪುಣ್ಯಸ್ಮರಣೆ ಅಂಗವಾಗಿ ಎಕ್ಸನಲ್ಲಿ ನಮನ ಸಲ್ಲಿಸಿರುವ ಅವರು, ಭಾರತೀಯ ಸಮಾಜದ ಜಾತಿವ್ಯವಸ್ಥೆಯನ್ನು ಅರ್ಥಮಾಡಿಕೊಂಡು, ಅದರಿಂದ ಬಿಡುಗಡೆಗೊಳ್ಳುವ ದಾರಿಯನ್ನು ತೋರಿದ ಲೋಹಿಯಾ, ಭಾರತೀಯ ಸಮಾಜದ ಪರಿವರ್ತನೆಗೆ ತಕ್ಕುದಾದ ಸಮಾಜವಾದಿ ಸಿದ್ಧಾಂತವನ್ನು ಪರಿಚಯಿಸಿದವರು ಎಂದು ಅವರು ಸ್ಮರಿಸಿದ್ದಾರೆ.
ಲೋಹಿಯಾ ಅವರ ವಿಚಾರಧಾರೆಗಳು ಕಾಲಕಾಲಕ್ಕೆ ನಿಶ್ಚಲ ಜಾತಿವ್ಯವಸ್ಥೆಯಲ್ಲಿ ಚಲನಶೀಲತೆಯನ್ನು ತಂದು, ಆ ಮೂಲಕ ಸಮಸಮಾಜದ ಬಂಡಿಯನ್ನು ಮುನ್ನಡೆಸುತ್ತಿವೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಲೋಹಿಯಾ ಅವರ ಆಲೋಚನೆಗಳು ಜನರ ನಡುವೆ ಚರ್ಚೆಗೆ ಒಳಗಾಗಬೇಕು. ಸಮಾಜವೂ ತನ್ನನ್ನು ತಾನು ಚರ್ಚೆಗೆ ಒಡ್ಡಿಕೊಳ್ಳಬೇಕು. ಆಗ ಮಾತ್ರ ಅವರ ಚಿಂತನೆಗಳಿಗೆ ಮರುಜೀವ ನೀಡಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
ತಮ್ಮ ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದ ಮೇಲೆ ಪ್ರಭಾವ ಬೀರಿದ ಮತ್ತು ತಾವು ಆದರ್ಶವಾಗಿ ಪಾಲಿಸುತ್ತಾ ಬಂದ ಮಹಾನ್ ವ್ಯಕ್ತಿಗಳಲ್ಲಿ ಲೋಹಿಯಾ ಕೂಡ ಒಬ್ಬರು ಎಂದು ಸ್ಮರಿಸಿರುವ ಸಿದ್ದರಾಮಯ್ಯ, ಅವರಿಗೆ ಪುಣ್ಯಸ್ಮರಣೆಯ ನಮನಗಳನ್ನು ಸಲ್ಲಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.