ಗ್ಯಾರಂಟಿ ಎಂದರೆ ಘೋಷಣೆ ಅಲ್ಲ, ಮನೆಯ ಆರ್ಥಿಕತೆಯಲ್ಲಿ ಬದಲಾವಣೆ: ಅಶೋಕ ಮಂದಾಲಿ
ಗದಗ, 10 ಅಕ್ಟೋಬರ್ (ಹಿ.ಸ.) ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಘೋಷಣೆಗಳಲ್ಲ, ಬದಲಾಗಿ ಸಾಮಾನ್ಯ ಜನರ ಬದುಕಿನಲ್ಲಿ ಆರ್ಥಿಕ ಬದಲಾವಣೆ ತರುವ ಜನಪರ ಕಾರ್ಯಕ್ರಮಗಳಾಗಿವೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಬಡ ಕುಟುಂಬಗಳ ಸಾಮಾಜಿಕ ಭದ್ರತೆ ಹಾಗೂ ಯುವಕರಿಗೆ ಆರ್ಥಿಕ ನೆರವು ನೀಡುವ ಮೂಲಕ ರಾಜ್ಯ ಸರ್ಕಾರ ಜ
ಫೋಟೋ


ಗದಗ, 10 ಅಕ್ಟೋಬರ್ (ಹಿ.ಸ.)

ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಘೋಷಣೆಗಳಲ್ಲ, ಬದಲಾಗಿ ಸಾಮಾನ್ಯ ಜನರ ಬದುಕಿನಲ್ಲಿ ಆರ್ಥಿಕ ಬದಲಾವಣೆ ತರುವ ಜನಪರ ಕಾರ್ಯಕ್ರಮಗಳಾಗಿವೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಬಡ ಕುಟುಂಬಗಳ ಸಾಮಾಜಿಕ ಭದ್ರತೆ ಹಾಗೂ ಯುವಕರಿಗೆ ಆರ್ಥಿಕ ನೆರವು ನೀಡುವ ಮೂಲಕ ರಾಜ್ಯ ಸರ್ಕಾರ ಜನರ ಬದುಕಿಗೆ ಆಸರೆಯಾಗಿದೆ ಎಂದು ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ 1.24 ಕೋಟಿಗೂ ಅಧಿಕ ಕುಟುಂಬಗಳ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯು ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರ ಪಾತ್ರವನ್ನು ಬಲಪಡಿಸುತ್ತಿದೆ. ಬಿಜೆಪಿ ಗ್ಯಾರಂಟಿ ಯೋಜನೆಗಳು ಸಾಧ್ಯವಿಲ್ಲ ಎಂದು ಟೀಕಿಸಿದ್ದರೂ, ಕಾಂಗ್ರೆಸ್ ಸರ್ಕಾರ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಮಹಿಳೆಯರ ಖಾತೆಗಳಿಗೆ ಸಾವಿರಾರು ಕೋಟಿ ರೂಪಾಯಿ ನೆರವು ತಲುಪಿಸಿದೆ. ಮಹಿಳೆಯರ ಕೈಗೆ ಹಣ ತಲುಪುವುದು ಕುಟುಂಬದ ಆರ್ಥಿಕ ಭದ್ರತೆಯನ್ನು ಬಲಪಡಿಸಿದಂತಾಗಿದೆ ಎಂದು ಹೇಳಿದ್ದಾರೆ.

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಿರುವುದರಿಂದ ಶಿಕ್ಷಣ, ಉದ್ಯೋಗ, ಆರೋಗ್ಯ ಸೇವೆ ಹಾಗೂ ಇತರ ಅಗತ್ಯಗಳಿಗಾಗಿ ಸಂಚರಿಸಲು ಅನುಕೂಲವಾಗಿದೆ. ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡುವುದರಿಂದ ಕುಟುಂಬಗಳ ವಿದ್ಯುತ್ ಬಿಲ್ ಹೊರೆ ಕಡಿಮೆಯಾಗಿದೆ. ಅನ್ನಭಾಗ್ಯ ಯೋಜನೆಯು ಬಡ ಕುಟುಂಬಗಳ ಆಹಾರ ಭದ್ರತೆಗೆ ನೆರವಾಗುತ್ತಿದ್ದು, ಹಸಿವು ನಿವಾರಣೆ ಸರ್ಕಾರದ ಮೂಲಭೂತ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.

ಯುವನಿಧಿ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,000 ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ 1,500 ರೂ. ಆರ್ಥಿಕ ನೆರವು ನೀಡುವ ಮೂಲಕ ಉದ್ಯೋಗ ಹುಡುಕುವ ಅವಧಿಯಲ್ಲಿ ಯುವಕರಿಗೆ ಬೆಂಬಲ ಒದಗಿಸಲಾಗುತ್ತಿದೆ. ಅಂಗನವಾಡಿ ಸಿಬ್ಬಂದಿಯ ಗೌರವಧನ ಮತ್ತು ಸೌಲಭ್ಯಗಳನ್ನು ಬಲಪಡಿಸುವುದು ಹಾಗೂ ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ಸಾಮಾಜಿಕ ಭದ್ರತಾ ಪಿಂಚಣಿ ಒದಗಿಸುವುದು ಜನಕಲ್ಯಾಣದ ಭಾಗವಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೂ ಆದ್ಯತೆ

ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದರೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತವೆ ಎಂಬ ಬಿಜೆಪಿಯ ವಾದ ಸರಿಯಲ್ಲ. ಸಾಮಾಜಿಕ ಕಲ್ಯಾಣ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸಮನ್ವಯಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ರಾಜ್ಯದ ಆರ್ಥಿಕ ಬೆಳವಣಿಗೆ, ತಲಾ ಆದಾಯ ಹೆಚ್ಚಳ, ಕೃಷಿ ಕ್ಷೇತ್ರಕ್ಕೆ ಅನುದಾನ ಹಾಗೂ ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಅಶೋಕ ಮಂದಾಲಿ ತಿಳಿಸಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಅನುದಾನ ಮೀಸಲಿಡುವುದು, ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸುವುದು ಹಾಗೂ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದು ರಾಜ್ಯದ ಅಭಿವೃದ್ಧಿಗೆ ಅಗತ್ಯವಾಗಿದೆ. ರೈತರು ಆರ್ಥಿಕವಾಗಿ ಸದೃಢರಾದರೆ ರಾಜ್ಯದ ಆರ್ಥಿಕತೆಯೂ ಬಲಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು

ಬೆಂಗಳೂರು ನಗರದಲ್ಲಿನ ಸಂಚಾರ ದಟ್ಟಣೆ ನಿವಾರಣೆಗೆ ನಮ್ಮ ಮೆಟ್ರೋ ವಿಸ್ತರಣೆ, ಸಾರ್ವಜನಿಕ ಸಾರಿಗೆ ಸುಧಾರಣೆ ಹಾಗೂ ಕೆ-ರೈಡ್ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡಬೇಕು. ಜಲಜೀವನ್ ಮಿಷನ್ ಸೇರಿದಂತೆ ವಿವಿಧ ಯೋಜನೆಗಳ ಸಮನ್ವಯದ ಮೂಲಕ ಮನೆಮನೆಗೆ ಶುದ್ಧ ಕುಡಿಯುವ ನೀರು ತಲುಪಿಸುವ ಪ್ರಯತ್ನ ಮುಂದುವರಿಯಬೇಕು. ಗ್ರಾಮೀಣ ಹಾಗೂ ನಗರ ಸಂಪರ್ಕ ರಸ್ತೆಗಳ ಅಭಿವೃದ್ಧಿಗೂ ವಿಶೇಷ ಆದ್ಯತೆ ನೀಡಬೇಕಿದೆ ಎಂದು ಹೇಳಿದ್ದಾರೆ.

ಕೈಗಾರಿಕೆಗಳಿಗೆ ಹೂಡಿಕೆ ಆಕರ್ಷಿಸುವ ಮೂಲಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ಬೆಂಗಳೂರು ಮಾತ್ರವಲ್ಲದೆ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಂತಹ ಪ್ರದೇಶಗಳಿಗೂ ವಿಶೇಷ ಅನುದಾನ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಒದಗಿಸುವ ಮೂಲಕ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ ಸಾಧಿಸಬೇಕು ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ಗ್ಯಾರಂಟಿ ಯೋಜನೆಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರೆ, ಜನರ ಕಲ್ಯಾಣಕ್ಕಾಗಿ ಹಣ ಬಳಸಬಾರದೇ ಎಂಬುದು ಕಾಂಗ್ರೆಸ್ನ ಪ್ರಶ್ನೆಯಾಗಿದೆ. ಸಾಮಾಜಿಕ ಭದ್ರತೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಸಮಾನ ಆದ್ಯತೆ ನೀಡುವುದೇ ಉತ್ತಮ ಆಡಳಿತದ ಲಕ್ಷಣವಾಗಿದೆ ಎಂದು ಅಶೋಕ ಮಂದಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande