ಗೃಹಲಕ್ಷ್ಮಿ ಹಣ ಸಾಲಕ್ಕೆ ಕಡಿತಗೊಳಿಸದಿರಲು ಬ್ಯಾಂಕುಗಳಿಗೆ ಸೂಚನೆ
ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಜಮೆಯಾಗುವ ₹2,000 ಹಣವನ್ನು ಅವರ ಸ್ಪಷ್ಟ ಲಿಖಿತ ಒಪ್ಪಿಗೆಯಿಲ್ಲದೆ ಸಾಲದ ಬಾಕಿಗೆ ಕಡಿತಗೊಳಿಸಬಾರದು ಎಂದು ಸರ್ಕಾರ ಬ್ಯಾಂಕ್ಗಳಿಗೆ ಸೂಚನೆ ನೀಡಿದೆ. ಈಗಾಗಲೇ ಕಡಿತಗೊಂಡಿರುವ ಮೊತ್ತವನ್ನು ಮರುಜಮೆ ಮಾಡುವಂತೆಯೂ ನಿರ್ದೇಶಿಸಿದೆ.
Gruhalakshmi-Scheme-Government-Orders-Banks-to-Refund-Deducted-Amount


ಬೆಂಗಳೂರು, 10 ಅಕ್ಟೋಬರ್ (ಹಿ.ಸ.):

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಯೋಜನೆಯಡಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆಯಾಗುವ ಮಾಸಿಕ ₹2,000 ನೆರವನ್ನು ಸಾಲದ ಕಂತು, ಬಡ್ಡಿ ಅಥವಾ ಇತರೆ ಬಾಕಿ ಮೊತ್ತಗಳಿಗೆ ಬ್ಯಾಂಕ್ಗಳು ಕಡಿತಗೊಳಿಸಬಾರದು ಎಂದು ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ.

ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸಾಲದ ಬಾಕಿ ವಸೂಲಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಮಹಿಳಾ ಫಲಾನುಭವಿಗಳ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ವಾಣಿಜ್ಯ ಬ್ಯಾಂಕ್ಗಳು, ಸಹಕಾರಿ ಬ್ಯಾಂಕ್ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ಹಾಗೂ ಇತರ ಹಣಕಾಸು ಸಂಸ್ಥೆಗಳು ಈ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಫಲಾನುಭವಿಗಳ ಒಪ್ಪಿಗೆ ಇಲ್ಲದೆ ಹಣ ಕಡಿತಕ್ಕೆ ಅವಕಾಶವಿಲ್ಲ

ಗೃಹಲಕ್ಷ್ಮಿ ಯೋಜನೆಯಡಿ ಜಮೆಯಾಗುವ ಹಣವನ್ನು ಫಲಾನುಭವಿಗಳ ಸ್ಪಷ್ಟ ಲಿಖಿತ ಒಪ್ಪಿಗೆಯಿಲ್ಲದೆ ಸಾಲದ ಬಾಕಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಸರ್ಕಾರ ನಿರ್ದೇಶನ ನೀಡಿದೆ.

ಈಗಾಗಲೇ ಫಲಾನುಭವಿಗಳ ಒಪ್ಪಿಗೆಯಿಲ್ಲದೆ ಹಣ ಕಡಿತಗೊಳಿಸಿದ್ದರೆ, ಆ ಮೊತ್ತವನ್ನು ತಕ್ಷಣವೇ ಅವರ ಬ್ಯಾಂಕ್ ಖಾತೆಗಳಿಗೆ ಮರುಜಮೆ ಮಾಡಬೇಕು ಎಂದು ಸೂಚಿಸಲಾಗಿದೆ.

ಈ ಸಂಬಂಧ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿಯ (ಎಸ್ಎಲ್ಬಿಸಿ) ಸಂಚಾಲಕರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಎಲ್ಲ ಹಣಕಾಸು ಸಂಸ್ಥೆಗಳು ಆದೇಶ ಪಾಲಿಸುತ್ತಿರುವುದನ್ನು ಖಚಿತಪಡಿಸಿಕೊಂಡು, ಕೈಗೊಂಡ ಕ್ರಮಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆಯೂ ಸೂಚಿಸಲಾಗಿದೆ.

ದಿನೇಶ್ ಗೂಳಿಗೌಡ ಮನವಿಗೆ ಸ್ಪಂದನೆ

ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೆಲವು ಬ್ಯಾಂಕ್ಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ಹಳೆಯ ಸಾಲದ ಕಂತು ಮತ್ತು ಬಡ್ಡಿ ವಸೂಲಿಗೆ ಕಡಿತಗೊಳಿಸುತ್ತಿವೆ ಎಂಬ ವಿಷಯವನ್ನು ವಿಧಾನ ಪರಿಷತ್ ಸದಸ್ಯ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಸರ್ಕಾರದ ಗಮನಕ್ಕೆ ತಂದಿದ್ದರು. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿ, ಫಲಾನುಭವಿಗಳ ಹಿತ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ್ದರು.

ಮಹಿಳೆಯರ ಕುಟುಂಬದ ದೈನಂದಿನ ಖರ್ಚು, ಮಕ್ಕಳ ಶಿಕ್ಷಣ ಹಾಗೂ ಆರ್ಥಿಕ ಸ್ವಾವಲಂಬನೆಗೆ ನೆರವಾಗುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಲಾಗಿದೆ. ಹೀಗಾಗಿ ಯೋಜನೆಯ ಹಣವನ್ನು ಫಲಾನುಭವಿಗಳಿಗೆ ಸಂಪೂರ್ಣವಾಗಿ ತಲುಪಿಸುವುದು ಅಗತ್ಯ ಎಂಬ ಮನವಿಯ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ದೇಶನಗಳನ್ನು ಹೊರಡಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande