ಕೆರೆ ಮಲಿನಗೊಳಿಸುವ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ: ಸಚಿವರ ಎಚ್ಚರಿಕೆ
ಆನೇಕಲ್ ತಾಲೂಕಿನ ವಿವಿಧ ಕೆರೆಗಳಿಗೆ ಸಂಸ್ಕರಿಸದ ಕೈಗಾರಿಕಾ ಹಾಗೂ ಒಳಚರಂಡಿ ತ್ಯಾಜ್ಯ ನೀರು ಸೇರುತ್ತಿರುವ ಹಿನ್ನೆಲೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಪರಿಶೀಲನೆ ನಡೆಸಿದ್ದು, ನಿಯಮ ಉಲ್ಲಂಘಿಸುವ ಕೈಗಾರಿಕೆಗಳು ಮತ್ತು ಸ್ಥಳೀಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ramalinga-reddy-warns-action-against-industries-polluting-lakes


ಬೆಂಗಳೂರು, 01 ಅಕ್ಟೋಬರ್ (ಹಿ.ಸ.):

ಆನೇಕಲ್ ತಾಲೂಕಿನ ವಿವಿಧ ಕೆರೆಗಳಿಗೆ ಕೈಗಾರಿಕೆಗಳು ಹಾಗೂ ವಸತಿ ಪ್ರದೇಶಗಳಿಂದ ಸಂಸ್ಕರಿಸದ ತ್ಯಾಜ್ಯ ನೀರು ಸೇರುತ್ತಿರುವ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ, ನಿಯಮ ಉಲ್ಲಂಘಿಸುವ ಕೈಗಾರಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಸಚಿವ ರಾಮಲಿಂಗಾರೆಡ್ಡಿ ಅವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಿವಣ್ಣ ಹಾಗೂ ಅಧಿಕಾರಿಗಳೊಂದಿಗೆ ಚಂದಾಪುರ, ರಾಮಕೃಷ್ಣಾಪುರ, ಹೆನ್ನಾಗರ, ಹೀಲಲಿಗೆ ಮತ್ತು ಮುತ್ತಾನಲ್ಲೂರು ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎಲೆಕ್ಟ್ರಾನಿಕ್ ಸಿಟಿ, ಜಿಗಣಿ ಮತ್ತು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಗಳಿಂದ ತ್ಯಾಜ್ಯ ನೀರು ಹಾಗೂ ಸ್ಥಳೀಯ ಪ್ರದೇಶಗಳ ಒಳಚರಂಡಿ ನೀರು ಕೆರೆಗಳಿಗೆ ಸೇರುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಯಿತು.

ಪರಿಶೀಲನೆ ವೇಳೆ ಸ್ಥಳೀಯರೊಂದಿಗೆ ಸಂವಾದ ನಡೆಸಿದ ಸಚಿವರು, “ಎನ್ಜಿಟಿ ನಿರ್ದೇಶನಗಳು ಹಾಗೂ ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

ಸಂಸ್ಕರಿಸದ ತ್ಯಾಜ್ಯ ನೀರನ್ನು ನೈಸರ್ಗಿಕ ಜಲಮೂಲಗಳಿಗೆ ಹರಿಸುವ ಕೈಗಾರಿಕೆಗಳು ಮತ್ತು ಸ್ಥಳೀಯ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಜತೆಗೆ, ನಿರ್ಮಾಣ ಹಂತದಲ್ಲಿರುವ ನಾಲ್ಕು ಪ್ರಮುಖ ನೀರು ಸಂಸ್ಕರಣಾ ಘಟಕಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಕಾರ್ಯಾರಂಭ ಮಾಡುವಂತೆ ಅಧಿಕಾರಿಗಳಿಗೆ ಸಮಯಬದ್ಧ ಕಾರ್ಯಯೋಜನೆ ರೂಪಿಸಲು ಸೂಚಿಸಿದರು.

ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಜಿಗಣಿ ಹಾಗೂ ಅತ್ತಿಬೆಲೆ ಪ್ರದೇಶಗಳ ಕೈಗಾರಿಕಾ ತ್ಯಾಜ್ಯ ನೀರು ಹೊರಹಾಕುವ ಸ್ಥಳಗಳ ಮೇಲೆ ನಿಗಾ ವಹಿಸಲು ವಿಶೇಷ ಮೇಲ್ವಿಚಾರಣಾ ತಂಡಗಳನ್ನು ರಚಿಸುವಂತೆಯೂ ನಿರ್ದೇಶಿಸಿದರು.

ಕೆರೆಗಳು ಮತ್ತು ಜಲಮೂಲಗಳ ಸಂರಕ್ಷಣೆಗೆ ಪರಿಸರ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಅಗತ್ಯವಾಗಿದ್ದು, ಮಾಲಿನ್ಯಕ್ಕೆ ಕಾರಣವಾಗುವ ಮೂಲಗಳ ವಿರುದ್ಧ ನಿರಂತರ ಮೇಲ್ವಿಚಾರಣೆ ನಡೆಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande