



ಬಳ್ಳಾರಿ, 01 ಅಕ್ಟೋಬರ್ (ಹಿ.ಸ.)
ಜಿಲ್ಲೆಯಲ್ಲಿ ದಾಖಲಾಗಿರುವ ಕಾಣೆಯಾದ ಮಕ್ಕಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರವಾಗಿ ಪತ್ತೆ ಹಚ್ಚಲು ಆಧುನಿಕ ತಂತ್ರಜ್ಞಾನದ ಸಮರ್ಥ ಬಳಕೆ ಹಾಗೂ ಗುರುತು ಪತ್ತೆಯಾಗದ ಶವಗಳ ಕಡ್ಡಾಯ ಪರಿಶೀಲನೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾಣೆಯಾದ ಮಕ್ಕಳ ಪತ್ತೆಹಚ್ಚುವಿಕೆಯ ವಿಶೇಷ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ನಾಪತ್ತೆ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ತನಿಖೆ ನಡೆಸಿ ಶೀಘ್ರ ಪತ್ತೆ ಹಚ್ಚುವಂತೆ ನಿರ್ದೇಶಿಸಿದರು.
ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಲ್ಲಿ ಪತ್ತೆಯಾಗುವ ಗುರುತು ಸಿಗದ ಮೃತದೇಹಗಳು ಮತ್ತು ಅಸ್ವಾಭಾವಿಕ ಸಾವುಗಳ ಪ್ರಕರಣಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ಕಾಣೆಯಾದ ಮಕ್ಕಳ ವಿವರಗಳೊಂದಿಗೆ ಯುಡಿಆರ್ ದಾಖಲೆಗಳನ್ನು ಕ್ರಾಸ್-ವೆರಿಫೈ ನಡೆಸಿ ತನಿಖೆ ಚುರುಕುಗೊಳಿಸಬೇಕು. ತನಿಖಾ ಪ್ರಕ್ರಿಯೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ಲೊಕೇಶನ್ ಟ್ರಾö್ಯಕಿಂಗ್ ಹಾಗೂ ಮುಖಚಹರೆ ಗುರುತಿಸುವ ಸುಧಾರಿತ ತಂತ್ರಜ್ಞಾನಗಳನ್ನು ಸಕ್ರಿಯವಾಗಿ ಬಳಸಿಕೊಳ್ಳಬೇಕು ಎಂದರು.
*ಪೊಲೀಸ್ ಠಾಣಾ ಮಟ್ಟದಲ್ಲಿ ಮೇಲ್ವಿಚಾರಣೆ:*
ಪ್ರತಿಯೊಂದು ಠಾಣಾ ವ್ಯಾಪ್ತಿಯಲ್ಲಿ ಬಾಕಿ ಇರುವ ಕಾಣೆಯಾದ ಮಕ್ಕಳ ಪ್ರಕರಣಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಲು ಮತ್ತು ತ್ವರಿತವಾಗಿ ಕುಟುಂಬದವರೊAದಿಗೆ ಮರುಸಂಪರ್ಕ ಕಲ್ಪಿಸಲು ವಿಶೇಷ ಗಮನ ಹರಿಸಬೇಕು. ಮಕ್ಕಳ ಸುರಕ್ಷತೆ ಪೊಲೀಸ್ ಇಲಾಖೆಯ ಪ್ರಮುಖ ಆದ್ಯತೆಯಾಗಿದ್ದು, ಯಾವುದೇ ನಿರ್ಲಕ್ಷ್ಯಕ್ಕೆ ಆಸ್ಪದ ನೀಡದೆ ಅಧಿಕಾರಿಗಳು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
*385 ಪ್ರಕರಣಗಳಲ್ಲಿ 366 ಮಕ್ಕಳ ಪತ್ತೆ:*
2020 ರಿಂದ 2026ರ ಸೆಪ್ಟೆಂಬರ್ 30ರ ವರೆಗೆ ಜಿಲ್ಲೆಯಲ್ಲಿ ಒಟ್ಟು 385 ಮಕ್ಕಳು ಕಾಣೆಯಾದ ಹಾಗೂ ಅಪಹರಣಕ್ಕೊಳಗಾದ ದೂರುಗಳು ದಾಖಲಾಗಿದ್ದು, ಇವುಗಳಲ್ಲಿ 366 ಮಕ್ಕಳನ್ನು ಯಶಸ್ವಿಯಾಗಿ ಪತ್ತೆಹಚ್ಚಲಾಗಿದೆ. ಇನ್ನುಳಿದ 19 ನಾಪತ್ತೆಯಾದ ಮಕ್ಕಳ ಪತ್ತೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.
ಬೆಂಗಳೂರು, ನೆರೆಯ ತಮಿಳುನಾಡು ಹಾಗೂ ತೆಲಂಗಾಣ ಸೇರಿದಂತೆ ವಿವಿಧೆಡೆ ತಂಡಗಳು ತೆರಳಿ ಹುಡುಕಾಟ ನಡೆಸಿವೆ. ಆದರೆ ಹಲವು ಪ್ರಕರಣಗಳಲ್ಲಿ ಆಧಾರ್ ವಿವರಗಳು ಸಿಗದಿರುವುದು ಮತ್ತು ವರ್ಷಗಳು ಕಳೆದಂತೆ ಮಕ್ಕಳ ಮುಖಚರ್ಯೆಯಲ್ಲಿ ಬದಲಾವಣೆಗಳಾಗುವುದು ಪತ್ತೆ ಕಾರ್ಯಕ್ಕೆ ದೊಡ್ಡ ಸವಾಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಅಲ್ಲದೆ ಕಾಲುವೆ ಅಥವಾ ನದಿ ಪಾತ್ರಗಳಲ್ಲಿ ಬಿದ್ದಿರಬಹುದಾದ ಶಂಕೆಯಿರುವ ಪ್ರಕರಣಗಳಲ್ಲಿಯೂ ಶೋಧ ನಡೆಸಿರುವುದಾಗಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ಪ್ರತಿಕ್ರಿಯಿಸಿ, ಮಕ್ಕಳು ಬೆಳೆದಂತೆ ಅವರ ಮುಖಚರ್ಯೆಯಲ್ಲಿ ಉಂಟಾಗುವ ಬದಲಾವಣೆಗಳನ್ನು ಗುರುತಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಾಫ್ಟ್ವೇರ್ ನೆರವು ಪಡೆಯಬಹುದು. ಕೆನಾಲ್ ಅಥವಾ ಡ್ಯಾಂನ ಕೆಳಹಂತದ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಗುರುತು ಪತ್ತೆಯಾಗದ ಮೃತದೇಹಗಳ ವಿವರಗಳನ್ನು ಕಡ್ಡಾಯವಾಗಿ ತಾಳೆ ಮಾಡಿ ಪರಿಶೀಲಿಸುವಂತೆ ನಿರ್ದೇಶನ ನೀಡಿದರು. ಹೊಸ ಪ್ರಕರಣಗಳ ಜೊತೆಗೆ ಹಳೆಯ ಬಾಕಿ ಉಳಿದಿರುವ ಪ್ರಕರಣಗಳ ಮೇಲೂ ನಿರಂತರ ನಿಗಾ ಇರಿಸಿ ಪೋಷಕರೊಂದಿಗೆ ಸಂಪರ್ಕದಲ್ಲಿರುವಂತೆ ಅಧಿಕಾರಿಗಳಿಗೆ ಸೂಚಿಸಿದರು.
*ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ಜಾಗೃತಿ:*
ಅಕ್ಕಪಡೆಯ ತಂಡಗಳು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸ್ಪಷ್ಟ ದಿನಚರಿ ರೂಪಿಸಿ, ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಒಂದು ದಿನ ಹಾಗೂ ಗ್ರಾಮಾಂತರ/ಹೊರವಲಯದಲ್ಲಿ ಮತ್ತೊಂದು ದಿನ ನಿರಂತರವಾಗಿ ಭೇಟಿ ನೀಡಿ ಕಣ್ಗಾವಲು ಇಡಬೇಕು ಎಂದು ತಿಳಿಸಿದರು.
*ರೈಲ್ವೆ ನಿಲ್ದಾಣಗಳಲ್ಲಿ ಮಕ್ಕಳ ರಕ್ಷಣೆ:*
ಮೆನೆ ಬಿಟ್ಟು ಬರುವ ಅಥವಾ ನಾಪತ್ತೆಯಾಗಿ ರೈಲುಗಳಲ್ಲಿ ಬರುವ ಮಕ್ಕಳನ್ನು ಪತ್ತೆಹಚ್ಚಲು ರೈಲ್ವೆ ಇಲಾಖೆಯ ಸಹಕಾರ ಪಡೆಯಬೇಕು. ಸಿಸಿಟಿವಿ ಕ್ಯಾಮೆರಾಗಳ ಮೇಲೆ ನಿಗಾ ವಹಿಸಬೇಕು. ರಕ್ಷಿಸಿದ ಮಕ್ಕಳನ್ನು ನಿಯಮಾನುಸಾರ ಸಿಡಬ್ಲೂö್ಯಸಿ ಮುಂದೆ ಹಾಜರುಪಡಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಮಾತನಾಡಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಅರ್ಥವಾಗುವಂತೆ ಬಾಲ್ಯವಿವಾಹ, ಪೋಕ್ಸೊ ಕಾಯ್ದೆ, ಡ್ರಗ್ಸ್, ಸೈಬರ್ ವಂಚನೆ ಹಾಗೂ ಮಹಿಳಾ ಸುರಕ್ಷತೆ ಕುರಿತ ಮಾಹಿತಿಯುಳ್ಳ ರೋಲ್-ಅಪ್ ಸ್ಟಾö್ಯಂಡಿ ಮತ್ತು ಚಾರ್ಟ್ಗಳನ್ನು ತಯಾರಿಸಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿಶೇಷ ಮಕ್ಕಳ ಪೊಲೀಸ್ ಘಟಕ ಮತ್ತು ಅಕ್ಕಪಡೆ ಸಿಬ್ಬಂದಿ ಒಗ್ಗೂಡಿ ಶಾಲೆ, ಕಾಲೇಜು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿರಂತರ ಅರಿವು ಕಾರ್ಯಕ್ರಮಗಳನ್ನು ನಡೆಸುವಂತೆ ಮಾರ್ಗದರ್ಶನ ನೀಡಿದರು.
ಇದೇ ಸಂದರ್ಭದಲ್ಲಿ ಅನಾಥ, ಸಂಕಷ್ಟದಲ್ಲಿರುವ ಹಾಗೂ ಕುಟುಂಬದ ಆಸರೆ ಕಳೆದುಕೊಂಡ ಮಕ್ಕಳಿಗೆ ಸುರಕ್ಷಿತ ಕೌಟುಂಬಿಕ ವಾತಾವರಣ ಒದಗಿಸುವ ಮಹತ್ವವನ್ನು ಸಾರುವ ‘ಪೋಷಕತ್ವ' ಜಾಗೃತಿ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಮಹಿಳಾ ಪೊಲೀಸ್ ಠಾಣೆಯ ಸಿಪಿಐ ರಮೇಶ್ ಕುಲಕರ್ಣಿ, ಎಸ್ ಜೆಪಿಯು ಘಟಕದ ಲಲಿತ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಂದಿನಿ ಶಿಂಧೆ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ವೆಂಕಟೇಶ್ ಚೆಟ್ಲ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರೈಲ್ವೇ ಪೊಲೀಸ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ‘ಅಕ್ಕ ಪಡೆ’ ಸಿಬ್ಬಂದಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್