
ಗದಗ, 01 ಅಕ್ಟೋಬರ್ (ಹಿ.ಸ.)
ದೀರ್ಘಾಯುಷ್ಯ ಹಾಗೂ ಸುದೀರ್ಘ ಜೀವನಕ್ಕಾಗಿ ನಮ್ಮ ದಿನನಿತ್ಯದ ಜೀವನದ ಕ್ರಮಗಳನ್ನು ಮರುಚಿಂತನೆ ಮಾಡುವುದು ಅತ್ಯಗತ್ಯ ಹಿರಿಯರ ಅನುಭವಗಳನ್ನು ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ತಿಳಿಸಿದರು.
ಗದದ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಸ್ವಯಂ ಸೇವಾ ಸಂಘ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘಗಳು ಇವರುಗಳ ಸಹಯೋಗದಲ್ಲಿ ಜರುಗಿದ ದೀರ್ಘಾಯುಷ್ಯದ ಯುಗ ಸುಧೀರ್ಘ ಜೀವನಕ್ಕಾಗಿ ಜೀವನ ಕ್ರಮಗಳ ಮರುಚಿಂತನೆ ಘೋಷವಾಕ್ಯದೊಂದಿಗೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆ 2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಿಗೆ ವಯಸ್ಸಾದಂತೆ ಅನುಭವ ಹೆಚ್ಚುತ್ತದೆ, ಅನುಭವಕ್ಕೆ ಯಾವುದೇ ಪರ್ಯಾಯವಿಲ್ಲ. ಹಿರಿಯರು ತಮ್ಮ ಜೀವನದಲ್ಲಿ ಕಲಿತ ಅನುಭವಗಳನ್ನು ಕಿರಿಯರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ತಪ್ಪುಗಳು ಕಡಿಮೆಯಾಗುತ್ತವೆ. ಪ್ರಸ್ತುತ ದಿನಮಾನಗಳಲ್ಲಿ ಸಣ್ಣ/ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿದ್ದು, ಹಿರಿಯರನ್ನು ಕೈಬಿಡುವ ಪ್ರವೃತ್ತಿ ಹೆಚ್ಚುತ್ತಿದೆ. ಇದರ ಜೊತೆಗೆ ಹಿರಿಯರ ಅನುಭವವನ್ನು ಅಳವಡಿಸಿಕೊಳ್ಳುವ ಮತ್ತು ಅವರೊಂದಿಗೆ ಸಮಯ ಕಳೆಯುವ ಅಗತ್ಯತೆ ಇಂದು ಸಮಾಜಕ್ಕೆ ಕುಟುಂಬ ವ್ಯವಸ್ಥೆ ಮತ್ತು ಹಿರಿತನ ಹೆಚ್ಚಾಗಿದೆ ಎಂದರು.
ನಿಶ್ಚಿಂತೆ ಮತ್ತು ಸಕ್ರಿಯ ಜೀವನಕ್ಕೆ ದೀರ್ಘಾಯುಷ್ಯದ ಮೂಲ ರಹಸ್ಯ. ಮನಸ್ಸು ಮತ್ತು ದೇಹ ಒಂದಾಗಿ ಸಾಗಿದಾಗ ವಯಸ್ಸಿನ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು. ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆಯಷ್ಟೇ. ಹಿರಿಯರು ತಾವೆಲ್ಲ ಕಂಡ ಅನುಭವದ ಸಾರವನ್ನು ಯುವ ಪೀಳಿಗೆಗೆ ಹಂಚಬೇಕು ಮತ್ತು ಕಿರಿಯರು ಹಿರಿಯರ ಮಾರ್ಗದರ್ಶನದಲ್ಲಿ ಸಾಗಬೇಕು ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದರು.
ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಶ್ರೀಮತಿ ಶ್ರೀದೇವಿ ಎಸ್.ಎನ್. ಸರ್ವರನ್ನು ಸ್ವಾಗತಿಸಿದರು. ಜ್ಞಾನಸಿಂಧು ರೆಸಿಡೆನ್ಸಿಯಲ್ ಅಂದ ಮಕ್ಕಳ ಶಾಲೆ ಹೊಳೆಆಲೂರು ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಮತ್ತು ನಾಡಗೀತೆ ಪ್ರಸ್ತುತ ಪಡಿಸಿದರು. ಪ್ರೊ. ಶಕುಂತಲಾ ಸಿಂಧೂರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಇದೇ ಸಂದರ್ಭದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ 2026 ರ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯ ನಾಗರಿಕರಿಗೆ ಗೌರವಿಸಿ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಸ್ಪರ್ಧೆ ಮತ್ತು ಕ್ರೀಡೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಮಣ್ಣೂರು, ಕೋ-ಆಫ್ ಕ್ರೆಡಿಟ್ ಸೊಸೈಟಿ ನಿವೃತ್ತ ಸರ್ಕಾರಿ ನೌಕರ ಬಿ. ಎಮ್. ಬಿಳೆಯಲಿ, ಕರ್ನಾಟಕ ರಾಜ್ಯ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘ ಕೆ. ಎಚ್. ಬೇಲೂರು, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಜಿ.ಎಸ್. ಹಿರೇಮಠ, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಿವೃತ್ತ ನೌಕರರ ಎಸ್. ಕೆ. ಖಂಡಪ್ಪಗೌಡ್ರ ಸೇರಿದಂತೆ ಹಿರಿಯ ನಾಗರಿಕರು, ಅಂಗವಿಕಲರ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP