
ಕೋಲ್ಕತ್ತಾ, 09 ಜನವರಿ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳ ರಾಜ್ಯಪಾಲ ಸಿವಿ ಆನಂದ ಬೋಸ್ ಅವರಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಕೋಲ್ಕತ್ತಾದ ರಾಜಭವನ (ಲೋಕ ಭವನ)ದಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ.
ರಾಜಭವನದ ಮೂಲಗಳ ಪ್ರಕಾರ, ಬೆದರಿಕೆ ಇಮೇಲ್‌ನಲ್ಲಿ ಮೊಬೈಲ್ ಸಂಖ್ಯೆಯನ್ನೂ ಉಲ್ಲೇಖಿಸಲಾಗಿದ್ದು, ವಿಷಯದ ಗಂಭೀರತೆಯನ್ನು ಪರಿಗಣಿಸಿ ಪೊಲೀಸ್ ಮಹಾನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ. ಬೆದರಿಕೆ ಸಂದೇಶದ ಮೂಲ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಲಾಗಿದೆ. ಈ ವಿಷಯವನ್ನು ಕೇಂದ್ರ ಗೃಹ ಸಚಿವಾಲಯ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ತಿಳಿಸಲಾಗಿದೆ.
ಪ್ರಸ್ತುತ ರಾಜ್ಯಪಾಲ ಬೋಸ್ ಅವರಿಗೆ Z-ಪ್ಲಸ್ ಭದ್ರತೆ ಒದಗಿಸಲಾಗಿದ್ದು, ಸುಮಾರು 70 ಕೇಂದ್ರ ಭದ್ರತಾ ಸಿಬ್ಬಂದಿಯನ್ನು ಅವರ ರಕ್ಷಣೆಗೆ ನಿಯೋಜಿಸಲಾಗಿದೆ. ಬೆದರಿಕೆ ನಂತರ ರಾಜ್ಯ ಪೊಲೀಸರು ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ರಾಜಭವನ ಸಂಕೀರ್ಣದೊಳಗೆ ಪರಿಶೀಲನೆ ನಡೆಸಿದ್ದು, ಕಣ್ಗಾವಲು ಹಾಗೂ ಪ್ರವೇಶ–ನಿರ್ಗಮನ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಜಾಗರೂಕತೆ ವಹಿಸಲಾಗಿದೆ.
ಗುರುವಾರ ಮಧ್ಯರಾತ್ರಿ ಭದ್ರತಾ ಸಂಸ್ಥೆಗಳ ವಿಶೇಷ ಸಭೆ ನಡೆಸಲಾಗಿದ್ದು, ರಾಜ್ಯಪಾಲರ ಭದ್ರತೆ ಹಾಗೂ ಮುಂಬರುವ ಕಾರ್ಯಕ್ರಮಗಳ ವೇಳೆ ಹೆಚ್ಚುವರಿ ಭದ್ರತಾ ಕ್ರಮಗಳ ಕುರಿತು ಚರ್ಚಿಸಲಾಗಿದೆ ಎಂದು ರಾಜಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಅಮಿತ್ ಮಾಳವೀಯ, “ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ರಾಜ್ಯಪಾಲರೇ ಸುರಕ್ಷಿತವಾಗಿಲ್ಲದಿದ್ದರೆ, ಸಾಮಾನ್ಯ ನಾಗರಿಕರ ಸ್ಥಿತಿ ಏನು?” ಎಂದು ರಾಜ್ಯ ಸರ್ಕಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ್ದಾರೆ.
ರಾಜಕೀಯ ತಂತ್ರಜ್ಞ ಸಂಸ್ಥೆ ಐ-ಪಿಎಸಿ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ಹಿನ್ನೆಲೆ ಕೋಲ್ಕತ್ತಾದಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚಿರುವ ನಡುವೆ ಈ ಬೆದರಿಕೆ ಪ್ರಕರಣ ಬೆಳಕಿಗೆ ಬಂದಿದೆ. ಈ ದಾಳಿಗೆ ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa