ಐ-ಪಿಎಸಿ ವಿವಾದ ; ಬೀದಿಗಿಳಿದು ಇಡಿ ವಿರುದ್ಧ ಮಮತಾ ಬ್ಯಾನರ್ಜಿ ಹೋರಾಟ
ರ‍್ಯಾಲಿ
Protest


ಕೋಲ್ಕತ್ತಾ, 09 ಜನವರಿ (ಹಿ.ಸ.) :

ಆ್ಯಂಕರ್ : ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಕೈಗೊಂಡ ಕ್ರಮವನ್ನು ಖಂಡಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಶುಕ್ರವಾರ ಕೋಲ್ಕತ್ತಾದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು. ಮುಂಬರುವ ವಿಧಾನ ಸಭಾ ಚುನಾವಣೆಗೆ ಮುನ್ನ ನಡೆದ ಈ ಮೆರವಣಿಗೆ ತೃಣಮೂಲ ಕಾಂಗ್ರೆಸ್ ಶಕ್ತಿ ಪ್ರದರ್ಶನವಾಗಿ ಕಂಡು ಬಂತು.

ದಕ್ಷಿಣ ಕೋಲ್ಕತ್ತಾದ 8ಬಿ ಬಸ್ ನಿಲ್ದಾಣದಿಂದ ಹಜ್ರಾ ಕ್ರಾಸಿಂಗ್‌ವರೆಗೆ ಮಮತಾ ಬ್ಯಾನರ್ಜಿ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸಿದರು.

ರಾಜ್ಯ ಸರ್ಕಾರದ ಹಿರಿಯ ಸಚಿವರು, ಸಂಸದರು, ಶಾಸಕರು ಹಾಗೂ ಪ್ರಮುಖ ಪಕ್ಷದ ನಾಯಕರು ಅವರೊಂದಿಗೆ ಇದ್ದರು. ರ‍್ಯಾಲಿಯಲ್ಲಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಕೇಂದ್ರ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಆರೋಪದೊಂದಿಗೆ ಘೋಷಣೆಗಳು ಮೊಳಗಿದವು.

ಇಡಿ ದಾಳಿಯ ವೇಳೆ ಐ-ಪಿಎಸಿ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸಕ್ಕೆ ಮಮತಾ ಬ್ಯಾನರ್ಜಿ ಅನಿರೀಕ್ಷಿತವಾಗಿ ಭೇಟಿ ನೀಡಿದ್ದ ಘಟನೆಯ ನಂತರ ಈ ಪ್ರತಿಭಟನೆ ನಡೆದಿದ್ದು, ಕೇಂದ್ರ–ರಾಜ್ಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಮೆರವಣಿಗೆಯಲ್ಲಿ ಬಂಗಾಳಿ ಸಾಂಸ್ಕೃತಿಕ ಛಾಯೆ ಸ್ಪಷ್ಟವಾಗಿ ಕಂಡು ಬಂದಿದ್ದು, ಹಾಡುಗಳು, ಶಂಖಧ್ವನಿಗಳು ಪ್ರತಿಭಟನೆಗೆ ಉತ್ಸವದ ಸ್ವರೂಪ ನೀಡಿದವು.

ನಟಿ–ರಾಜಕಾರಣಿ ದೇವ್, ನಟ ಸೋಹಂ ಚಕ್ರವರ್ತಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ರಾಜ್ಯಾದ್ಯಂತ ನಡೆಯಲಿರುವ ಚಳುವಳಿಗಳ ಸರಣಿಗೆ ಇದು ಮೊದಲ ಹೆಜ್ಜೆಯಾಗಿದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande