
ನವದೆಹಲಿ, 09 ಜನವರಿ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಅಭಿವೃದ್ಧಿಪಡಿಸಿರುವ ರಾಷ್ಟ್ರೀಯ ಐಇಡಿ ದತ್ತಾಂಶ ನಿರ್ವಹಣಾ ವ್ಯವಸ್ಥೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ವರ್ಚುವಲ್ ಮೂಲಕ ಉದ್ಘಾಟಿಸಿದರು. ಈ ಎಐ-ಸಕ್ರಿಯ ವೇದಿಕೆ ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು.
ದೇಶಾದ್ಯಂತ ಸಂಭವಿಸುವ ಸುಧಾರಿತ ಸ್ಫೋಟಕ ಸಾಧನಗಳ ಸಂಬಂಧಿತ ಮಾಹಿತಿಯನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಸಂಗ್ರಹಿಸಿ, ವಿಶ್ಲೇಷಿಸಿ ಹಾಗೂ ಭದ್ರತಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವ ಸಾಮರ್ಥ್ಯ NIDMSಗೆ ಇದೆ. ಇದರಿಂದ ಭಯೋತ್ಪಾದಕ ಘಟನೆಗಳನ್ನು ವಿಶ್ಲೇಷಿಸುವುದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಹಾಗೂ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವುದು ಸುಲಭವಾಗಲಿದೆ ಎಂದು ಅಮಿತ್ ಶಾ ಹೇಳಿದರು.
NSG ಅನ್ನು ವಿಶ್ವದರ್ಜೆಯ ‘ಶೂನ್ಯ ದೋಷ ಪಡೆ’ ಎಂದು ವರ್ಣಿಸಿದ ಅವರು, ಬದಲಾಗುತ್ತಿರುವ ಭದ್ರತಾ ಸವಾಲುಗಳಿಗೆ ತಕ್ಕಂತೆ ಸಂಸ್ಥೆ ನಿರಂತರವಾಗಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದರು. ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಅಹಮದಾಬಾದ್ ಹಾಗೂ ಅಯೋಧ್ಯೆಯಲ್ಲಿ NSG ಕೇಂದ್ರಗಳ ಸ್ಥಾಪನೆಯಿಂದ ತುರ್ತು ಸಂದರ್ಭಗಳಲ್ಲಿ ಒಂದೂವರೆ ಗಂಟೆಯೊಳಗೆ ದೇಶದ ಯಾವುದೇ ಭಾಗವನ್ನು ತಲುಪುವ ವ್ಯವಸ್ಥೆ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.
NIDMS, ರಾಷ್ಟ್ರೀಯ ಬಾಂಬ್ ದತ್ತಾಂಶ ಕೇಂದ್ರದ ಭಾಗವಾಗಿದ್ದು, NIA, ರಾಜ್ಯ ಪೊಲೀಸ್, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಸೇರಿದಂತೆ ವಿವಿಧ ತನಿಖಾ ಮತ್ತು ಉಗ್ರನಿಗ್ರಹ ಸಂಸ್ಥೆಗಳಿಗೆ ದ್ವಿಮುಖ ಆನ್‌ಲೈನ್ ದತ್ತಾಂಶ ಪ್ರವೇಶ ಒದಗಿಸುತ್ತದೆ. ಇದರಿಂದ ವಿವಿಧ ಬಾಂಬ್ ಸ್ಫೋಟಗಳ ನಡುವಿನ ಸಂಬಂಧ, ಮಾದರಿ ಹಾಗೂ ಪ್ರವೃತ್ತಿಗಳನ್ನು ಗುರುತಿಸಿ ಭವಿಷ್ಯದ ದಾಳಿಗಳನ್ನು ತಡೆಗಟ್ಟಲು ನೆರವಾಗಲಿದೆ.
ಈ ಡಿಜಿಟಲ್ ವ್ಯವಸ್ಥೆ ಭಾರತದ ಐಇಡಿ ಪ್ರತಿದಾಳಿ ಸಾಮರ್ಥ್ಯ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಹೊಸ ಶಕ್ತಿ ನೀಡಲಿದೆ ಎಂದು ಸರ್ಕಾರ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa