ಕೇರಳ ಭಾಷಾ ಮಸೂದೆ ವಿರುದ್ಧ ಆರ್.ಅಶೋಕ ಕಿಡಿ
ಬೆಂಗಳೂರು, 10 ಜನವರಿ (ಹಿ.ಸ.) : ಆ್ಯಂಕರ್ : ಕೇರಳದಲ್ಲಿ ಆನೆ ತುಳಿತದಿಂದ ಸಾವು ಸಂಭವಿಸಿದರೂ, ವಯನಾಡಿನಲ್ಲಿ ಪ್ರಕೃತಿ ವಿಕೋಪ ಉಂಟಾದರೂ ಕೇರಳಿಗರ ಪರವಾಗಿ ಕರ್ನಾಟಕ ಸರ್ಕಾರದ ಮೇಲೆ ಸವಾರಿ ನಡೆಸುವ ಸಂಸದೆ ಪ್ರಿಯಾಂಕಾ ಗಾಂಧಿ ಅವರು, ಇದೀಗ ಕೇರಳ ಸರ್ಕಾರ ತರಲು ಮುಂದಾಗಿರುವ ಮಲಯಾಳಂ ಭಾಷಾ ಮಸೂದೆ–2025
Ashok


ಬೆಂಗಳೂರು, 10 ಜನವರಿ (ಹಿ.ಸ.) :

ಆ್ಯಂಕರ್ : ಕೇರಳದಲ್ಲಿ ಆನೆ ತುಳಿತದಿಂದ ಸಾವು ಸಂಭವಿಸಿದರೂ, ವಯನಾಡಿನಲ್ಲಿ ಪ್ರಕೃತಿ ವಿಕೋಪ ಉಂಟಾದರೂ ಕೇರಳಿಗರ ಪರವಾಗಿ ಕರ್ನಾಟಕ ಸರ್ಕಾರದ ಮೇಲೆ ಸವಾರಿ ನಡೆಸುವ ಸಂಸದೆ ಪ್ರಿಯಾಂಕಾ ಗಾಂಧಿ ಅವರು, ಇದೀಗ ಕೇರಳ ಸರ್ಕಾರ ತರಲು ಮುಂದಾಗಿರುವ ಮಲಯಾಳಂ ಭಾಷಾ ಮಸೂದೆ–2025 ವಿರುದ್ಧ ಕನ್ನಡಿಗರ ಪರ ಧ್ವನಿ ಎತ್ತುವರೇ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ 1ರಿಂದ 10ನೇ ತರಗತಿಯವರೆಗೆ ಮಲಯಾಳಂ ಅನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುವ ಪ್ರಸ್ತಾವನೆ ಒಳಗೊಂಡಿರುವ ಈ ಮಸೂದೆ, ಕಾಸರಗೋಡು ಸೇರಿದಂತೆ ಕೇರಳದ ಕನ್ನಡಿಗರ ಭಾಷಾ ಹಕ್ಕುಗಳಿಗೆ ಧಕ್ಕೆ ತರುತ್ತದೆ ಎಂದಿದ್ದಾರೆ.

ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವು ವಿಚಾರದಲ್ಲಿ ಕೇರಳದ ಪರ ತೋರಿದ ಕಾಳಜಿಯನ್ನು, ಕಾಂಗ್ರೆಸ್ ನಾಯಕರು ಈಗ ಕನ್ನಡಿಗರ ಹಿತಾಸಕ್ತಿಗೆ ತೋರಿಸುತ್ತಾರೆಯೇ ಎಂಬುದನ್ನೂ ಆರ್.ಅಶೋಕ ಪ್ರಶ್ನಿಸಿದ್ದಾರೆ.

ಅಕ್ರಮ ವಲಸಿಗರ ವಿಷಯದಲ್ಲಿ “ಮಾನವೀಯತೆ” ಹೆಸರಿನಲ್ಲಿ ರೋಹಿಂಗ್ಯರು ಮತ್ತು ಬಾಂಗ್ಲಾದೇಶಿಗಳ ಪರವಾಗಿ ಮಾತನಾಡುವ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರ ಮನಸ್ಸು, ಕಾಸರಗೋಡಿನ ಕನ್ನಡಿಗರ ಭಾಷಾ ಮತ್ತು ಸಾಂಸ್ಕೃತಿಕ ಹಕ್ಕುಗಳಿಗಾಗಿ ಮಿಡಿಯುವುದಿಲ್ಲವೇ ಎಂದು ಅವರು ತೀವ್ರವಾಗಿ ಟೀಕಿಸಿದ್ದಾರೆ.

ಕರ್ನಾಟಕದ ಸ್ವಾಭಿಮಾನ ಮತ್ತು ಆತ್ಮಗೌರವಕ್ಕೆ ಪದೇ ಪದೇ ಧಕ್ಕೆ ತರುತ್ತಿರುವ ಕಾಂಗ್ರೆಸ್ ಪಕ್ಷದ ಕೇರಳ ನಾಯಕತ್ವ, ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ರಾಜಕೀಯ ಲಾಭ ಮತ್ತು ಸ್ವಾರ್ಥಕ್ಕಾಗಿ ಕರ್ನಾಟಕದ ಹಾಗೂ ಕನ್ನಡಿಗರ ಹಿತಾಸಕ್ತಿಯನ್ನು ಬಲಿ ಕೊಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ, ಕನ್ನಡಿಗರು ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ ಎಂದು ಆರ್.ಅಶೋಕ ಎಚ್ಚರಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande