
ಚಂಡೀಗಡ, 08 ಜನವರಿ (ಹಿ.ಸ.) :
ಆ್ಯಂಕರ್ : ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಗ್ಯಾರಂಟಿ, ವಿದ್ಯುತ್ ಬಿಲ್ ಸಂಪೂರ್ಣ ಮನ್ನಾ, ರೈತರ ಸಾಲ ಮನ್ನಾ ಸೇರಿದಂತೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಸಂಯುಕ್ತ ಕಿಸಾನ್ ಮೋರ್ಚಾ ದೇಶವ್ಯಾಪಿ ಜಾಗೃತಿ ರ‍್ಯಾಲಿ ನಡೆಸಲು ನಿರ್ಧರಿಸಿದೆ.
ಫೆಬ್ರವರಿ ಮೊದಲ ವಾರದಲ್ಲಿ ಆರಂಭಗೊಳ್ಳುವ ಈ ರ‍್ಯಾಲಿ ದೇಶದ ದಕ್ಷಿಣ ತುದಿಯಾದ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರದವರೆಗೆ ಸಾಗಲಿದೆ.
ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಈ ಕುರಿತು ಮಾಹಿತಿ ನೀಡಿದ್ದು, ರೈತರ ಸಮಸ್ಯೆಗಳ ಬಗ್ಗೆ ದೇಶದ ಜನರಲ್ಲಿ ಅರಿವು ಮೂಡಿಸುವುದು ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯುವುದು ಈ ಜಾಗೃತಿ ರ‍್ಯಾಲಿಯ ಮುಖ್ಯ ಉದ್ದೇಶ ಎಂದು ತಿಳಿಸಿದ್ದಾರೆ. ದೇಶದ ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳ ಮೂಲಕ ಸಾಗುವ ಈ ಪಾದಯಾತ್ರೆ ಹಾಗೂ ವಾಹನ ರ್ರ್ಯಾಲಿಯಲ್ಲಿ ಸಾವಿರಾರು ರೈತರು, ಕೃಷಿಕ ಸಂಘಟನೆಗಳ ಪ್ರತಿನಿಧಿಗಳು ಮತ್ತು ಬೆಂಬಲಿಗರು ಭಾಗವಹಿಸುವ ನಿರೀಕ್ಷೆಯಿದೆ.
ಎಂ ಎಸ್ ಪಿ ಗೆ ಕಾನೂನುಬದ್ಧ ಭರವಸೆ ನೀಡದೆ ಇದ್ದರೆ ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಸಮ್ಮತ ಬೆಲೆ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಎಸಕೆಎಂ ಪುನರುಚ್ಚರಿಸಿದೆ. ಅದೇ ರೀತಿ ವಿದ್ಯುತ್ ದರ ಏರಿಕೆ ಹಾಗೂ ಬಾಕಿ ಬಿಲ್‌ಗಳಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ವಿದ್ಯುತ್ ಬಿಲ್ ಮನ್ನಾ ಸೇರಿದಂತೆ ಕೃಷಿಗೆ ಬೇಕಾದ ಇನ್ಪುಟ್ ವೆಚ್ಚಗಳನ್ನು ಕಡಿತಗೊಳಿಸುವುದು ಅಗತ್ಯ ಎಂದು ಮೋರ್ಚಾ ಆಗ್ರಹಿಸಿದೆ.
ಇದೊಂದಿಗೇ ಕೃಷಿಕರು ಮತ್ತು ಗ್ರಾಮೀಣ ಕುಟುಂಬಗಳು ಸಾಲದ ಬಾಧೆಯಿಂದ ನಲುಗುತ್ತಿದ್ದು, ಸಮಗ್ರ ಸಾಲ ಮನ್ನಾ ಜಾರಿಗೆ ತರಬೇಕು ಎಂದು ಎಸಕೆಎಮ್ ಒತ್ತಾಯಿಸಿದೆ. ರೈತ ವಿರೋಧಿ ನೀತಿಗಳನ್ನು ಕೈಬಿಟ್ಟು, ಕೃಷಿಯನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾಯಕರು ಹೇಳಿದ್ದಾರೆ.
ಈ ಜಾಗೃತಿ ರ‍್ಯಾಲಿ ಮಾರ್ಚ್ 19ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾರೀ ಸಮಾವೇಶದೊಂದಿಗೆ ಮುಕ್ತಾಯಗೊಳ್ಳಲಿದೆ. ಈ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ರೈತರು ಪಾಲ್ಗೊಂಡು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಲಿದ್ದಾರೆ. ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಘೋಷಿಸಲಾಗುವುದು ಎಂದು ಜಗಜಿತ್ ಸಿಂಗ್ ದಲ್ಲೆವಾಲ್ ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa