ಅಪಘಾತ ತಡೆಗೆ ಜಾಗೃತಿ ಅಗತ್ಯ : ಅರುಣ ಕಟ್ಟಿಮನಿ
ಗದಗ, 08 ಜನವರಿ (ಹಿ.ಸ.) : ಆ್ಯಂಕರ್ : ಜೀವ ಮನುಷ್ಯನಿಗೆ ಅತ್ಯಮೂಲ್ಯವಾದದ್ದು. ವಾಹನ ಚಲಾಯಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ರಸ್ತೆ ಅಪಘಾತಗಳು, ಸಾವು–ನೋವುಗಳನ್ನು ತಡೆಯುವ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದು ಹಿರಿಯ ಮೋಟಾರು ವಾಹನ ನಿರೀಕ್ಷಕ ಅರುಣ ಕಟ್ಟಿಮನಿ ಹೇ
ಫೋಟೋ


ಗದಗ, 08 ಜನವರಿ (ಹಿ.ಸ.) :

ಆ್ಯಂಕರ್ : ಜೀವ ಮನುಷ್ಯನಿಗೆ ಅತ್ಯಮೂಲ್ಯವಾದದ್ದು. ವಾಹನ ಚಲಾಯಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ರಸ್ತೆ ಅಪಘಾತಗಳು, ಸಾವು–ನೋವುಗಳನ್ನು ತಡೆಯುವ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದು ಹಿರಿಯ ಮೋಟಾರು ವಾಹನ ನಿರೀಕ್ಷಕ ಅರುಣ ಕಟ್ಟಿಮನಿ ಹೇಳಿದರು.

ಗದಗ ಜಿಲ್ಲೆಯ ಲಕ್ಷೇಶ್ವರದಲ್ಲಿ ಆಯೋಜಿಸಲಾದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಹೆ–2026 ಅಂಗವಾಗಿ ವಾಹನ ಸವಾರರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿಷ್ಕಾಳಜಿ ಮತ್ತು ಬೇಜಾವಾಬ್ದಾರಿಯಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ ಎಂದು ತಿಳಿಸಿದ ಅವರು, ವಾಹನ ಚಲಾಯಿಸುವಾಗ ಏಕಚಿತ್ತದಿಂದ ಚಾಲನೆ ಮಾಡಬೇಕು. ಹೆಡ್‌ಲೈಟ್ ಸರಿಯಾಗಿ ಬಳಸಿ, ರಸ್ತೆ ನಿಯಮಗಳು ಹಾಗೂ ಸಂಜ್ಞೆ–ಸನ್ನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ವಾಹನ ಚಲಾಯಿಸುವಾಗ ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಚಾಲನೆಯ ವೇಳೆ ಮೊಬೈಲ್ ಫೋನ್, ಸೌಂಡ್ ಸಿಸ್ಟಂ ಬಳಸಬಾರದು. ವಾಹನದ ಹಿಂಭಾಗದಲ್ಲಿ ರೇಡಿಯಂ ಸ್ಟಿಕ್ಕರ್ ಅಳವಡಿಸಬೇಕು. ಅಲಂಕಾರಿಕ ವಸ್ತುಗಳನ್ನು ವಾಹನದಲ್ಲಿ ಬಳಸದೇ, ಅಗತ್ಯ ದಾಖಲೆಗಳನ್ನು ಸದಾ ಹೊಂದಿರಬೇಕು ಎಂದು ಅವರು ಸಲಹೆ ನೀಡಿದರು.

ಓವರ್ ಸ್ಪೀಡ್ ಹಾಗೂ ಅತಿಯಾದ ಆತ್ಮವಿಶ್ವಾಸ ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ. ಇದನ್ನು ವಾಹನ ಸವಾರರು ಅರಿತು ಸಂಯಮದಿಂದ ಚಾಲನೆ ಮಾಡಬೇಕು ಎಂದು ಹೇಳಿದರು.

ರಸ್ತೆ ಸುರಕ್ಷತಾ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಸಹಯೋಗದಲ್ಲಿ ಈ ತಿಂಗಳೊಳಗೆ ಶಾಲೆ–ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಿಕೊಂಡು ಸ್ವಯಂ ಪಾಲನೆಯ ಮೂಲಕ ರಸ್ತೆ ಸುರಕ್ಷತೆಯನ್ನು ಕಾಪಾಡಬೇಕು ಎಂದು ಅರುಣ ಕಟ್ಟಿಮನಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ ಸೇರಿದಂತೆ ಗಣ್ಯರು, ವಾಹನ ಸವಾರರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande