
ನವದೆಹಲಿ, 07 ಜನವರಿ (ಹಿ.ಸ.) :
ಆ್ಯಂಕರ್ : ಭಾರತೀಯ ಕರಾವಳಿ ರಕ್ಷಣಾ ನೌಕೆ ‘ಐಸಿಜಿಎಸ್ ಸಮುದ್ರ ಪ್ರತಾಪ್’ ಸೇರ್ಪಡೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಇದು ಭಾರತದ ಕಡಲ ಭದ್ರತೆ ಹಾಗೂ ಸ್ವಾವಲಂಬಿ ರಕ್ಷಣಾ ಸಾಮರ್ಥ್ಯದತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಎಕ್ಸ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ, ಸಮುದ್ರ ಪ್ರತಾಪ್ ದೇಶದ ಕರಾವಳಿ ಕಣ್ಗಾವಲು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಕಡಲ ಹಿತಾಸಕ್ತಿಗಳ ರಕ್ಷಣೆಗೆ ಹೊಸ ಶಕ್ತಿ ನೀಡಲಿದೆ ಎಂದರು.
ಹಡಗಿನಲ್ಲಿ ಬಳಸಲಾದ ಆಧುನಿಕ ತಂತ್ರಜ್ಞಾನ ಪರಿಸರ ಸ್ನೇಹಿಯಾಗಿದ್ದು, ಸುಸ್ಥಿರ ಹಾಗೂ ಜವಾಬ್ದಾರಿಯುತ ಕಾರ್ಯಾಚರಣೆಗೆ ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಈ ಹಡಗಿನ ಕಾರ್ಯಾರಂಭವು ಭಾರತದ ಕಡಲ ಭದ್ರತಾ ಪ್ರಯಾಣದಲ್ಲಿ ಒಂದು ಮೈಲಿಗಲ್ಲು ಆಗಿದ್ದು, ರಕ್ಷಣೆ ಮತ್ತು ಭದ್ರತೆಗೆ ಇತರರ ಮೇಲೆ ಅವಲಂಬಿತವಾಗದೆ, ಸ್ವಂತ ಸಾಮರ್ಥ್ಯವನ್ನು ದೇಶ ನಿರ್ಮಿಸಿಕೊಳ್ಳುತ್ತಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಸ್ಪಷ್ಟಪಡಿಸಿದರು.
ಸ್ವಾವಲಂಬನೆ, ಬಲಿಷ್ಠ ಭದ್ರತಾ ವ್ಯವಸ್ಥೆ ಹಾಗೂ ಸುಸ್ಥಿರ ಭವಿಷ್ಯದತ್ತ ಭಾರತದ ಬದ್ಧತೆಯನ್ನು ‘ಸಮುದ್ರ ಪ್ರತಾಪ್’ ಸ್ಪಷ್ಟವಾಗಿ ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa