
ನವದೆಹಲಿ, 08 ಜನವರಿ (ಹಿ.ಸ.) :
ಆ್ಯಂಕರ್ : ಸೋಮನಾಥ ಸ್ವಾಭಿಮಾನ್ ಪರ್ವದ ಆರಂಭದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಶ್ರೀ ಸೋಮನಾಥ ಮಹಾದೇವರ ಆಶೀರ್ವಾದವನ್ನು ಕೋರಿ ಪ್ರಾಚೀನ ಸಂಸ್ಕೃತ ಶ್ಲೋಕವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಎಕ್ಸ್ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ, “ಶ್ರೀ ಸೋಮನಾಥ ಮಹಾದೇವನ ಅನುಗ್ರಹ ಮತ್ತು ಆಶೀರ್ವಾದಗಳು ಎಲ್ಲರಿಗೂ ಯೋಗಕ್ಷೇಮವನ್ನು ತರಲಿ” ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅವರು ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರದ ಶ್ಲೋಕವೊಂದನ್ನು ಉಲ್ಲೇಖಿಸಿದ್ದಾರೆ.
ಸೋಮನಾಥ ಜ್ಯೋತಿರ್ಲಿಂಗದ ಮಹಿಮೆಯನ್ನು ವರ್ಣಿಸುವ ಈ ಶ್ಲೋಕದಲ್ಲಿ, ಸೌರಾಷ್ಟ್ರದ ವಿಶಾಲ ಹಾಗೂ ಸುಂದರ ಭೂಭಾಗದಲ್ಲಿ ನೆಲೆಸಿರುವ, ಚಂದ್ರನನ್ನು ತಲೆಯ ಮೇಲೆ ಆಭರಣದಂತೆ ಧರಿಸಿರುವ ಹಾಗೂ ಭಕ್ತರಿಗೆ ಕೃಪೆ ಮತ್ತು ಭಕ್ತಿಯನ್ನು ದಯಪಾಲಿಸುವ ಶ್ರೀ ಸೋಮನಾಥ ಮಹಾದೇವನಲ್ಲಿ ಆಶ್ರಯ ಪಡೆಯುವ ಭಾವಾರ್ಥವನ್ನು ವಿವರಿಸಲಾಗಿದೆ.
ಸೋಮನಾಥ ಜ್ಯೋತಿರ್ಲಿಂಗವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾಗಿ ಪರಿಗಣಿಸಲ್ಪಟ್ಟಿದ್ದು, ಭಾರತೀಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಸೋಮನಾಥ ಸ್ವಾಭಿಮಾನ್ ಪರ್ವವು ದೇಶದ ಆಧ್ಯಾತ್ಮಿಕ ಪರಂಪರೆ, ಸ್ವಾಭಿಮಾನ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಸ್ಮರಿಸುವ ಮಹತ್ವದ ಸಂದರ್ಭವಾಗಿದ್ದು, ಪ್ರಧಾನಿಯ ಸಂದೇಶವು ಭಕ್ತರಲ್ಲಿ ವಿಶೇಷ ಸ್ಪಂದನ ಮೂಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa