
ಗುವಾಹಟಿ, 05 ಜನವರಿ (ಹಿ.ಸ.) :
ಆ್ಯಂಕರ್ : ಇಂದು ಮುಂಜಾನೆ ಈಶಾನ್ಯ ಭಾರತದ ಹಲವಾರು ರಾಜ್ಯಗಳಲ್ಲಿ ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದೆ. ಬೆಳಿಗ್ಗೆ 4:17:40ಕ್ಕೆ ದಾಖಲಾಗಿದ ಭೂಕಂಪನವು ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆಯನ್ನು ಹೊಂದಿತ್ತು. ಕಂಪನವು ಕೆಲ ಸಮಯ ಮುಂದುವರಿದ ಕಾರಣ ಜನರಲ್ಲಿ ಭೀತಿ ಮೂಡಿತು.
ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಭೂಕಂಪನದ ಸ್ಪಷ್ಟ ಅನುಭವ ಕಂಡು ಬಂದಿತು. ಜೊತೆಗೆ ಭಾರತದ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್, ಭೂತಾನ್ ಮತ್ತು ಚೀನಾದ ಕೆಲವು ಭಾಗಗಳಲ್ಲೂ ಕಂಪನ ಅನುಭವಿಸಲಾಗಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿಯಂತೆ, ಭೂಕಂಪದ ಕೇಂದ್ರಬಿಂದು ಅಸ್ಸಾಂನ ಮೋರಿಗಾಂವ್ ಜಿಲ್ಲೆಯ ಕರಾವಳಿಯಿಂದ ಸುಮಾರು 14 ಕಿಲೋಮೀಟರ್ ದೂರದಲ್ಲಿ, ಭೂಮಿಯೊಳಗೆ 50 ಕಿಲೋಮೀಟರ್ ಆಳದಲ್ಲಿ ಇತ್ತು. ಇದರ ಭೌಗೋಳಿಕ ಸ್ಥಾನಮಾನ 26.37 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 92.29 ಡಿಗ್ರಿ ಪೂರ್ವ ರೇಖಾಂಶವಾಗಿದೆ.
ಈ ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟ ಸಂಭವಿಸಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa