
ಬೆಂಗಳೂರು, 23 ಜನವರಿ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಬೈಕ್ ಟ್ಯಾಕ್ಸಿಗಳಿಗೆ ಲೈಸೆನ್ಸ್ ನೀಡುವುದನ್ನು ಸರ್ಕಾರ ಸಂಪೂರ್ಣವಾಗಿ ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳು ಅನುಮತಿ ಕೋರಿ ಅರ್ಜಿ ಸಲ್ಲಿಸಿದಲ್ಲಿ, ಅವುಗಳನ್ನು ಪರಿಗಣಿಸಿ ಕಾನೂನುಬದ್ಧವಾಗಿ ಪರವಾನಗಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ. ಈ ಮೂಲಕ ಬೈಕ್ ಟ್ಯಾಕ್ಸಿ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದ್ದು, ಬೈಕ್ ಟ್ಯಾಕ್ಸಿ ಸೇವೆಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅವಿಭಾಜ್ಯ ಅಂಗ ಎಂದು ಅಭಿಪ್ರಾಯಪಟ್ಟಿದೆ. ಕಾನೂನು ಚೌಕಟ್ಟಿನೊಳಗೆ ಇಂತಹ ಸೇವೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು ಸರಿಯಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಈ ತೀರ್ಪಿನಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಅಧಿಕೃತ ಪುನರಾರಂಭಕ್ಕೆ ದಾರಿ ತೆರೆದಂತಾಗಿದೆ. ಇದರಿಂದ ಉದ್ಯೋಗಾವಕಾಶಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಪ್ರಯಾಣಿಕರಿಗೆ ಕಡಿಮೆ ವೆಚ್ಚದ ಹಾಗೂ ಸುಲಭ ಸಾರಿಗೆ ಸೌಲಭ್ಯ ಲಭ್ಯವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಇದೇ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ನೀತಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.
ಈ ಹಿಂದೆ ಬೈಕ್ ಟ್ಯಾಕ್ಸಿಗಳು ಅಸುರಕ್ಷಿತ ಹಾಗೂ ಕಾನೂನುಬಾಹಿರವೆಂದು ಸರ್ಕಾರ ರಚಿಸಿದ್ದ ಹೈಪವರ್ ಕಮಿಟಿ 2025ರ ನವೆಂಬರ್ 26ರಂದು ಹೈಕೋರ್ಟ್‌ಗೆ ವರದಿ ಸಲ್ಲಿಸಿತ್ತು. ಕೇಂದ್ರ ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆ, ನಗರ ಸಂಚಾರ ದಟ್ಟಣೆ ಹಾಗೂ ಸಾರ್ವಜನಿಕ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿತ್ತು. ಆದರೆ, ಆ ವರದಿಯನ್ನು ಪರಿಗಣಿಸಿದರೂ ಅಂತಿಮವಾಗಿ ನ್ಯಾಯಾಲಯ ಬೈಕ್ ಟ್ಯಾಕ್ಸಿ ಸಂಸ್ಥೆಗಳ ಮೇಲ್ಮನವಿಗೆ ಒಪ್ಪಿಗೆ ನೀಡಿದೆ.
ಹೈಕೋರ್ಟ್ ಆದೇಶದ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ,
“ಆದೇಶದ ಪ್ರತಿ ಪರಿಶೀಲಿಸಿದ ಬಳಿಕ ಸಾರಿಗೆ ಆಯುಕ್ತರೊಂದಿಗೆ ಚರ್ಚೆ ನಡೆಸಲಾಗುತ್ತದೆ. ಏಕಸದಸ್ಯ ಪೀಠದ ನಿಷೇಧವನ್ನು ವಿಭಾಗೀಯ ಪೀಠ ತೆರವುಗೊಳಿಸಿದೆ. ರಿಟ್ ಅರ್ಜಿಗೂ ಅವಕಾಶ ಇದೆ. ಕಾನೂನು ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa