ಇಂದೋರ್ನಲ್ಲಿ ಇ-ಕಾರ್ ಚಾರ್ಜಿಂಗ್ ವೇಳೆ ಸ್ಫೋಟ: ಒಂದೇ ಕುಟುಂಬದ 6 ಮಂದಿ ಸಾವು
ಇಂದೋರ್, 18 ಮಾರ್ಚ್ (ಹಿ.ಸ.): ಆ್ಯಂಕರ್: ಮಧ್ಯಪ್ರದೇಶದ ಇಂದೋರ್‌ನ ಬಂಗಾಳಿ ಚೌಕದ ಸಮೀಪದ ನಿವಾಸಿ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲ
Blast


ಇಂದೋರ್, 18 ಮಾರ್ಚ್ (ಹಿ.ಸ.):

ಆ್ಯಂಕರ್:

ಮಧ್ಯಪ್ರದೇಶದ ಇಂದೋರ್‌ನ ಬಂಗಾಳಿ ಚೌಕದ ಸಮೀಪದ ನಿವಾಸಿ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಮನೆಯ ಹೊರಭಾಗದಲ್ಲಿ ನಿಲ್ಲಿಸಿದ್ದ ವಿದ್ಯುತ್ ಕಾರನ್ನು ಚಾರ್ಜ್ ಮಾಡುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಸ್ಫೋಟ ಸಂಭವಿಸಿದೆ. ಈ ಸ್ಫೋಟದಿಂದ ಕಾರಿಗೆ ಬೆಂಕಿ ಹೊತ್ತಿಕೊಂಡು, ಕೆಲವೇ ಕ್ಷಣಗಳಲ್ಲಿ ಮನೆಗೂ ವ್ಯಾಪಿಸಿದೆ.

ಮನೆಯೊಳಗೆ 10ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್‌ಗಳು ಹಾಗೂ ದಹನಕಾರಿ ವಸ್ತುಗಳು ಸಂಗ್ರಹವಾಗಿದ್ದ ಕಾರಣ, ಬೆಂಕಿ ಮತ್ತಷ್ಟು ಭೀಕರ ರೂಪ ಪಡೆದಿದೆ. ಕನಿಷ್ಠ ನಾಲ್ಕು ಸಿಲಿಂಡರ್‌ಗಳು ಸ್ಫೋಟಗೊಂಡಿದ್ದು, ಪರಿಣಾಮವಾಗಿ ಮನೆಯ ಭಾಗಶಃ ಕುಸಿತವೂ ಸಂಭವಿಸಿದೆ.

ಘಟನೆಯ ಸಮಯದಲ್ಲಿ ಮನೆಯಲ್ಲಿ ಕುಟುಂಬ ಸಮಾರಂಭ ನಡೆಯುತ್ತಿದ್ದು, ಅನೇಕರು ನಿದ್ರಿಸುತ್ತಿದ್ದರು. ವಿದ್ಯುತ್ ವ್ಯತ್ಯಯದಿಂದ ಎಲೆಕ್ಟ್ರಾನಿಕ್ ಬೀಗಗಳು ಕಾರ್ಯನಿರ್ವಹಿಸದೆ, ಹಲವರು ಒಳಗೆ ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿಶಾಮಕ ದಳ, ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ.

ಈ ದುರ್ಘಟನೆಯಲ್ಲಿ ಮನೋಜ್ ಜೈನ್ ಪುಗಾಲಿಯಾ (65), ಸಿಮ್ರಾನ್ (30), ವಿಜಯ್ ಸೇಥಿಯಾ (65), ಸುಮನ್ ಸೇಥಿಯಾ (60), ರಾಶಿ (12) ಹಾಗೂ ಛೋಟು ಸೇಥಿಯಾ (22) ಮೃತಪಟ್ಟಿದ್ದಾರೆ. ಸೌರಭ್ (32), ಸುನಿತಾ (58) ಮತ್ತು ಸೋಮಿಲ್ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದೋರ್ ಪೊಲೀಸ್ ಆಯುಕ್ತರು ಘಟನೆಯ ಬಗ್ಗೆ ವಿವರ ನೀಡಿ, ವಿದ್ಯುತ್ ವಾಹನದ ಚಾರ್ಜಿಂಗ್ ವೇಳೆ ಸ್ಫೋಟ ಸಂಭವಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ತಿಳಿಸಿದ್ದಾರೆ. ಮನೆಯಲ್ಲಿ ಪಾಲಿಮರ್ ವ್ಯಾಪಾರಕ್ಕೆ ಸಂಬಂಧಿಸಿದ ಕೆಲವು ರಾಸಾಯನಿಕ ವಸ್ತುಗಳೂ ಇದ್ದವು ಎಂಬ ಮಾಹಿತಿ ಲಭ್ಯವಾಗಿದೆ.

ಜಿಲ್ಲಾಧಿಕಾರಿ ಶಿವಂ ವರ್ಮಾ ಅವರು ಮಾತನಾಡಿ, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಕಟ್ಟಡದ ಎರಡು ಮಹಡಿಗಳನ್ನು ಖಾಲಿ ಮಾಡಲಾಗಿದೆ. ಉಳಿದ ಭಾಗವನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಘಟನೆಯ ಕುರಿತು ಸಮಗ್ರ ತನಿಖೆ ಮುಂದುವರೆದಿದೆ

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande