
ನವದೆಹಲಿ, 23 ಜನವರಿ (ಹಿ.ಸ.) :
ಆ್ಯಂಕರ್ : ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ದೇಶಾದ್ಯಂತ ಪರಾಕ್ರಮ್ ದಿವಸ್ ಆಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ನೇತಾಜಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಅರ್ಪಿಸಿದರು.
ನೇತಾಜಿಯವರ ಜಯಂತಿಯ ಅಂಗವಾಗಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಕೂಡ ಅವರಿಗೆ ಗೌರವ ನಮನ ಸಲ್ಲಿಸಿದರು. ನೇತಾಜಿಯವರ ನಿರ್ಭೀತ ನಾಯಕತ್ವ, ಅದಮ್ಯ ಧೈರ್ಯ ಮತ್ತು ಭಾರತದ ಸ್ವಾತಂತ್ರ್ಯಕ್ಕಾಗಿ ಅವರ ಅಚಲ ಬದ್ಧತೆ ನಿಜವಾದ ಶೌರ್ಯದ ಪ್ರತೀಕವಾಗಿದ್ದು, ಇದು ಮುಂದಿನ ಪೀಳಿಗೆಗೆ ಸದಾ ಸ್ಫೂರ್ತಿಯ ಮೂಲವಾಗಿರುತ್ತದೆ ಎಂದು ಅವರು ಹೇಳಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಆಜಾದ್ ಹಿಂದ್ ಫೌಜ್ ಸ್ಥಾಪಕ ಹಾಗೂ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸಿದರು.
ಪರಾಕ್ರಮ್ ದಿವಸ್ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭಾಶಯಗಳನ್ನು ಕೋರಿ, ನೇತಾಜಿಯವರ ತ್ಯಾಗ ಮತ್ತು ದೇಶಭಕ್ತಿ ಅಮರವಾದುದೆಂದು ಅವರು ಹೇಳಿದರು.
“ಜೈ ಹಿಂದ್”, “ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ” ಎಂಬ ಘೋಷಣೆಗಳ ಮೂಲಕ ರಾಷ್ಟ್ರದಲ್ಲಿ ಕ್ರಾಂತಿಯ ಚೈತನ್ಯವನ್ನು ಜಾಗೃತಗೊಳಿಸಿದ ನೇತಾಜಿಯನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಮರಿಸಿದರು.
ಮಾತೃಭೂಮಿಗೆ ನೇತಾಜಿಯವರ ಅಪಾರ ಸಮರ್ಪಣೆ ಹಾಗೂ ಕೋಮುವಾದದ ವಿರುದ್ಧ ಅವರ ದೃಢ ನಿಲುವು ಇಂದಿಗೂ ಜನತೆಗೆ ಸ್ಫೂರ್ತಿಯಾಗುತ್ತಿದೆ ಎಂದು ಅವರು ಹೇಳಿದರು.
ಲೋಕ ಸಭೆಯ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನೇತಾಜಿಯನ್ನು ಮಹಾನ್ ಕ್ರಾಂತಿಕಾರಿಯಾಗಿ ವರ್ಣಿಸಿ, ಅವರ ಧೈರ್ಯ, ದೃಢನಿಶ್ಚಯ ಮತ್ತು ನಾಯಕತ್ವವೇ ದೇಶವನ್ನು ಸ್ವಾತಂತ್ರ್ಯದ ದಾರಿಯಲ್ಲಿ ಮುನ್ನಡೆಸಿತು ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa